ಬಂಟ್ವಾಳ: ಲಾಕ್ ಡೌನ್ ಸರಳವಾಗುತ್ತಿದ್ದಂತೆ ಬಿಳಿ ಬಣ್ಣದ ಅಪರೂಪದ ಹೆಬ್ಬಾವೊಂದು ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಮನೆಯೊಂದಕ್ಕೆ ಗುರುವಾರ ಬಂದಿದ್ದು, ಉರಗತಜ್ಞ ಸ್ನೇಕ್ ಕಿರಣ್ ನೇತೃತ್ವದ ಉರಗಪ್ರೇಮಿಗಳ ತಂಡ ಹೆಬ್ಬಾವನ್ನು ಹಿಡಿದು ವಲಯ ಅರಣ್ಯಾಧಿಕಾರಿಗಳ ನಿರ್ದೇಶನದಂತೆ ಪಿಲಿಕುಳಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಅಪರೂಪದ ಬಿಳಿ ಬಣ್ಣದ ಈ ಹೆಬ್ಬಾವು ಕಾವಳಕಟ್ಟೆ ನಿವಾಸಿ ನೌಶಾದ್ ಅವರ ಮನೆಯಲ್ಲಿ ಕಂಡುಬಂದಿದ್ದು, ಈ ವಿಚಾರವನ್ನು ಸ್ನೇಕ್ ಕಿರಣ್ ಅವರ ಗಮನಕ್ಕೆ ತರಲಾಯಿತು. ಅವರು ಸ್ಥಳಕ್ಕೆ ಭೇಟಿ ನೀಡಿ ಛಾಯಾಗ್ರಾಹಕರಾದ ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ಪ್ರಸಾದ್ ಅವರ ಸಹಕಾರದಿಂದ ಅದನ್ನು ಯಶಸ್ವಿಯಾಗಿ ಹಿಡಿದಿದ್ದಾರೆ.
ಸ್ನೇಕ್ ಕಿರಣ್ ಹೇಳುವ ಪ್ರಕಾರ ಬಿಳಿ ಬಣ್ಣದ ಇಂತಹ ಹೆಬ್ಬಾವು ಸಿಗುವುದು ಅಪರೂಪವಾಗಿದ್ದು, ನಾವು 2ನೇ ಬಾರಿಗೆ ಇಂತಹ ಹೆಬ್ಬಾವನ್ನು ಕಂಡಿದ್ದೇವೆ. ಇದು ಹುಟ್ಟುವಾಗ ಚರ್ಮದ ವರ್ಣದ್ರವ್ಯದ ಕೊರತೆಯ ಹಿನ್ನೆಲೆಯಲ್ಲಿ ಹೀಗಾಗುತ್ತವೆ. ಹೀಗಾಗಿ ಅದನ್ನು ಆಲ್ಬಿನೊ ಎನ್ನಲಾಗುತ್ತದೆ. ಜತೆಗೆ ಇಂತಹ ಹಾವನ್ನು ಇತರ ಹಾವುಗಳು ಹೆಚ್ಚು ಸಮಯ ಬದುಕಲು ಬಿಡುವುದಿಲ್ಲ ಎನ್ನುತ್ತಾರೆ.
Click this button or press Ctrl+G to toggle between Kannada and English