ಪಂಪ್‍ವೆಲ್ – ಪಡೀಲ್ ರಸ್ತೆ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿ, ಸ್ಟೇಟ್‍ಬ್ಯಾಂಕ್ ಸರ್ವೀಸ್ ಬಸ್ ನಿಲ್ದಾಣ ನವೀಕರಣ

6:45 PM, Friday, June 5th, 2020
Share
1 Star2 Stars3 Stars4 Stars5 Stars
(No Ratings Yet)
Loading...

nalin-kumarಮಂಗಳೂರು :  ಮಂಗಳೂರು ನಗರ ಪ್ರವೇಶಿಸುವ ಪ್ರಮುಖ ರಸ್ತೆ ಪಂಪ್‍ವೆಲ್ ನಿಂದ ಪಡೀಲ್‍ವರೆಗೆ ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‍ಸಿಟಿ ಅಡಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್‍ಸಿಟಿ ನಗರ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಸುಮಾರು 2800 ಮೀಟರ್ ಉದ್ದದ ಈ ರಸ್ತೆಯ ಅಭಿವೃದ್ಧಿ ತುರ್ತು ಅಗತ್ಯವಾಗಿದ್ದು, ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಇದಕ್ಕೆ ಅನುದಾನ ಕಾದಿರಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಸ್ಮಾರ್ಟ್ ರಸ್ತೆ ಪ್ಯಾಕೇಜ್‍ಗಳಲ್ಲಿ ಹಲವು ಕಡೆಗಳಲ್ಲಿ ರಸ್ತೆ ಅಗಲೀಕರಣ ಕಷ್ಟಸಾಧ್ಯವಾದ ಕಾರಣ ಸದರೀ ಕಾಮಗಾರಿಗಳಲ್ಲಿ ಉಳಿಕೆಯಾಗುವ ಮೊತ್ತದಲ್ಲಿ ಹೆಚ್ಚುವರಿ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲು ನಿರ್ಧರಿಸಲಾಯಿತು.

ಪಂಪ್‍ವೆಲ್‍ನಲ್ಲಿ ಪಿ.ಪಿ.ಪಿ. ಮಾದರಿಯಡಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್ ಸಲ್ಲಿಸಲು ಜುಲೈ 27ರವರೆಗೆ ಕಾಲಾವಕಾಶ ಇದೆ. ಸ್ಟೇಟ್‍ಬ್ಯಾಂಕ್ ಬಳಿ ಇರುವ ಸರ್ವೀಸ್ ಬಸ್ ನಿಲ್ದಾಣ ನವೀಕರಣ ಕಾಮಗಾರಿಯೂ ಅಗತ್ಯವಿದೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲು ಸಂಸದರು ಸೂಚಿಸಿದರು.

ನಗರದ ಕ್ಲಾಕ್ ಟವರ್‍ನಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಏಕಮುಖ ರಸ್ತೆ ಪ್ರಾಯೋಗಿಕವಾಗಿ ಸಾಧುವಲ್ಲ ಎಂದು ತಿಳಿಸಿದ ನಳಿನ್ ಕುಮಾರ್, ಸ್ಟೇಟ್‍ಬ್ಯಾಂಕ್ ಮಾರ್ಕೆಟ್ ಪರಿಸರದಲ್ಲಿ ರಸ್ತೆಯಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಏಕಮುಖ ರಸ್ತೆಯಾದರೆ, ಸಂಚಾರ ಸಮಸ್ಯೆ ಇನ್ನಷ್ಟು ದಟ್ಟಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಯಿಂದ ಜೆಪ್ಪು ಮಹಾಕಾಳಿಪಡ್ಪು ನೇರ ರೈಲ್ವೇ ರಸ್ತೆ ಅಭಿವೃದ್ಧಿಗೆ ಈಗಿನ ಡಿಪಿಆರ್‍ನಲ್ಲಿ ಅಲ್ಪ ಮಾರ್ಪಾಡು ಮಾಡಿ, ಮುಂದುವರಿಸಲು ಸಂಸದರು ಸೂಚಿಸಿದರು.

ಸ್ಮಾರ್ಟ್‍ಸಿಟಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಹಳೇ ಕಟ್ಟಡಗಳನ್ನು ಹೆರಿಟೇಜ್ ವಿನ್ಯಾಸದಂತೆ ಅಭಿವೃದ್ಧಿಪಡಿಸುವ ಪ್ರಸ್ತಾವವನ್ನು ಕೈಬಿಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೇ ಕಾರ್‍ಸ್ಟ್ರೀಟ್ ಪುನರ್ ನಿರ್ಮಾಣ/ಪುನಶ್ಚೇತನ ಅಡಿ ವೆಂಕಟರಮಣ ದೇವಸ್ಥಾನ ಜಂಕ್ಷನನ್ನು ವಿಶೇಷ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಯಿತು. ಹಂಪನಕಟ್ಟೆ ಹಳೇ ಸರ್ವೀಸ್ ಬಸ್ ನಿಲ್ದಾಣದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಸಂಬಂಧ ಶೀಘ್ರವೇ ಪ್ರಕ್ರಿಯೆ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಮಂಗಳೂರು ನಗರದ ಕೇಂದ್ರ ವ್ಯಾಪ್ತಿಯಲ್ಲಿ 9 ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮಹಾನಗರಪಾಲಿಕಯು ಸ್ಮಾಟ್‍ಸಿಟಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಸುಮಾರು 20.50 ಕೋಟಿ ರೂ. ವೆಚ್ಚದಲ್ಲಿ ಇವುಗಳನ್ನು ಅಭಿವೃರ್ದಧಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅಲ್ಲದೇ, ರೂ. 18.13 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಈಗಾಗಲೇ ಅನುಮೋದನೆ ನೀಡಿರುವ ಬೆಂಗರೆ ಫೆರಿ ರಸ್ತೆ, ಬೆಂಗರೆ ಫಿಶರೀ ರಸ್ತೆ, ಮುಳಿಹಿತ್ಲು ರಸ್ತೆ ಹಾಗೂ ಗುಜ್ಜರಕೆರೆ ರಸ್ತೆಗಳನ್ನು ಈಗಾಗಲೇ ಬೇರೆ ಇಲಾಖೆಗಳು ಅಭಿವೃದ್ಧಿಪಡಿಸಿರುವುದರಿಂದ ಆ ಯೋಜನೆಗಳನ್ನು ಕೈಬಿಡಲು ತೀರ್ಮಾನಿಸಲಾಯಿತು. ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಗೆ ಈಗಿನ ಸ್ಥಳದ ಬದಲು ಬದಲಿ ಸ್ಥಳವನ್ನು ಮಹಾನಗರಪಾಲಿಕೆ ನೀಡಿದರೆ, ಅಭಿವೃದ್ಧಿಪಡಿಸಲು ತೀರ್ಮಾನಿಸಲಾಯಿತು.

ಗುಜ್ಜರಕೆರೆಯನ್ನು 4 ಕೋಟಿ ರೂ. ವೆಚ್ಚದಲ್ಲಿ ಹಾಗೂ ಕಾವೂರು ಕೆರೆಯನ್ನು 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕದ್ರೀ ಉದ್ಯಾನವನವನ್ನು ರೂ. 12 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ದಿಪಡಿಸಲಾಗುತ್ತಿದೆ. ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಹಾಗೂ ಸಮುದಾಯ ಮಟ್ಟದ ಸೌಲಭ್ಯಗಳ ಅಭಿವೃದ್ಧಿಗೆ ರೂ. 24.94 ಕೋಟಿ ವಿನಿಯೋಗಿಸಲಾಗುವುದು ಎಂದು ಸ್ಮಾರ್ಟ್‍ಸಿಟಿ ವ್ಯಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ತಿಳಿಸಿದರು.

ಮಂಗಳಾ ಕ್ರೀಡಾಂಗಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ ಹಾಗೂ ಸೆಂಟ್ರಲ್ ಮಾರುಕಟ್ಟೆಯನ್ನು 145 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಮಂಗಳೂರು ಮಹನಗರಪಾಲಿಕೆ ವ್ಯಾಪ್ತಿಯಲ್ಲಿ 24×7 ನೀರು ಸರಬರಾಜು ಅನುಷ್ಠಾನಕ್ಕೆ ವಿತರಣಾ ವ್ಯವಸ್ಥೆಗೆ 114 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಅವರು ಹೇಳಿದರು.

ಲೋಕಸಭಾ ಸದಸ್ಯ ನಳಿನ್ ಕುಮಾರ ಕಟೀಲು ಮಾತನಾಡಿ, ಮಂಗಳೂರು ನಗರದ ಅಭಿವೃದ್ಧಿಗೆ ಕೇಂದ್ರ – ರಾಜ್ಯ ಸರಕಾರಗಳಿಂದ ವಿವಿಧ ಯೋಜನೆಗಳಡಿ ಬೃಹತ್ ಮೊತ್ತದ ಅನುದಾನವೇ ಮಹಾನಗರಪಾಲಿಕೆಗೆ ಬಂದಿದೆ. ಆದರೂ, ತೆರಿಗೆ ಸೇರಿದಂತೆ ಮಹಾನಗರಪಾಲಿಕೆಯ ಆಂತರಿಕ ಸಂಪನ್ಮೂಲ ಸಂಗ್ರಹ ಉತ್ತಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆಯು ತನ್ನ ಆಂತರಿಕ ಹಣಕಾಸು ವ್ಯವಸ್ಥೆಯನ್ನು ಸುದೃಢಗೊಳಿಸಬೇಕಿದೆ. ತೆರಿಗೆ ಸಂಗ್ರಹವನ್ನು ಹೆಚ್ಚು ಶಿಸ್ತಿನಿಂದ ನಡೆಸಬೇಕು. ದೀರ್ಘಕಾಲದಿಂದ ಬಾಕಿ ಇರುವ ಎಲ್ಲಾ ಶುಲ್ಕ ಹಾಗೂ ತೆರಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ಸಂಗ್ರಹಿಸಿ, ತನ್ನ ಆರ್ಥಿಕ ಸಂಪನ್ಮೂಲವನ್ನು ಸುದೃಢಗೊಳಿಸಬೇಕು. ಸಾರ್ವಜನಿಕ ಸೇವೆಯನ್ನು ಜನಸ್ನೇಹಿಯಾಗಿಸಬೇಕು ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನಗರದಲ್ಲಿ ರಸ್ತೆ ಅಭಿವೃದ್ಧಿಗಿಂತಲೂ ರಸ್ತೆ ಅಗಲೀಕರಣ ಪ್ರಾಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಾನು ಪ್ರತೀ ವಾರ ಸಭೆ ನಡೆಸಿ, ರಸ್ತೆ ಅಗಲೀಕರಣ ಅಗತ್ಯ ಇರುವ ಕಡೆಗಳಲ್ಲಿ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಮಹಾನಗರಪಾಲಿಕೆ ಉಪ ಆಯುಕ್ತ ಸಂತೋಷ್ ಕುಮಾರ್, ಸ್ಮಾರ್ಟ್‍ಸಿಟಿ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English