ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದ ನೂತನ ಅಧ್ಯಕ್ಷರಾಗಿ ಕರ್ನಾಟಕ ಸರಕಾರದಿಂದ ನೇಮಕಗೊಂಡಿರುವ ರವಿಶಂಕರ್ ಮಿಜಾರು ಅವರು ಸೋಮವಾರ ನಗರದ ಉರ್ವಾ ಸ್ಟೋರ್‌ನಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕ ಎನ್. ಯೋಗೀಶ್ ಭಟ್, ಮೇಯರ್ ದಿವಾಕರ ಪಾಂಡೇಶ್ವರ, ಮುಡಾ ಆಯುಕ್ತ ದಿನೇಶ್ ಕುಮಾರ್, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಸುದರ್ಶನ್, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಹರಿಕೃಷ್ಣ ಬಂಟ್ವಾಳ, ಜಗದೀಶ ಶೇಣವ, ಸತೀಶ್ ಕುಂಪಲ, ವಿಜಯ ಕುಮಾರ್ ಶೆಟ್ಟಿ, ಈಶ್ವರ ಕಟೀಲು, ರಣದೀಪ್ ಕಾಂಚನ್ ಉಪಸ್ಥಿತರಿದ್ದರು.
ರವಿಶಂಕರ ಮಿಜಾರ್ ಅವರು ಕಾನೂನು ಪದವೀಧರರಾಗಿದ್ದು, ಸುಮಾರು ನಾಲ್ಕು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಮಂಗಳೂರು ನಗರ ದಕ್ಷಿಣ ಕ್ಷೇತ್ರ ಅಧ್ಯಕ್ಷ, ಬಿಜೆಪಿ ಜಿಲ್ಲಾ ವಕ್ತಾರ ಸೇರಿಂದಂತೆ ವಿವಿಧ ಹುದ್ದೆ ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸಾರ್ವಜನಿಕರಿಂದ ವಿವಿಧ ಕಾರ್ಯಗಳಿಗೆ ಮೂಡಾ ಕಚೇರಿಗೆ ಅರ್ಜಿಗಳು ಬರುತ್ತವೆ. ವಿಳಂಬವಿಲ್ಲದೆ ಅವರಿಗೆ ತ್ವರಿತವಾಗಿ ಸೇವೆಗಳು ಲಭ್ಯವಾಗುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಸೇವೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಹಾಗೂ ತ್ವರಿತ ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ಡಿಜಿಟಲೈಸೇಷನ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ನೂತನ ಅಧ್ಯಕ್ಷರು ವಿವರಿಸಿದರು.
Click this button or press Ctrl+G to toggle between Kannada and English