ಬೆಂಗಳೂರು : ಲಾಕ್ ಡೌನ್ ಸಮಯದಲ್ಲಿ ಎದುರಾದ ಸಂಕಷ್ಟಗಳನ್ನ ಗೆದ್ದು, ಯೆಮೆನ್ ರಾಷ್ಟ್ರದ 9 ವರ್ಷದ ಬಾಲಕಿಯ ಎಡ ತೊಡೆಯ ಎಲುಬಿಗೆ ಕಾಣಿಸಿಕೊಂಡ ಕ್ಯಾನ್ಸರ್ ಗೆ ಶಸ್ತ್ರ ಚಿಕಿತ್ಸೆ ಕೈಗೊಳ್ಳುವಲ್ಲಿ ನಗರದ ಮಾರತ್ ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ನಿಜಕ್ಕೂ ಇದೊಂದು ಅಪರೂಪದ ಪ್ರಕರಣವಾಗಿದ್ದು ಸಂಕಷ್ಟದ ವೇಳೆಯಲ್ಲಿಯೂ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹೆಣೆಯಾಗಿದೆ. ಲಾಕ್ ಡೌನ್ ಆಗುವುದಕ್ಕೆ ಕೆಲ ದಿನಗಳು ಬಾಕಿ ಇರುವಾಗಲಷ್ಟೇ ಯೆಮೆನ್ ರಾಷ್ಟ್ರದ ಬಾಲಕಿಯೊಬ್ಬಳನ್ನ ಎಡ ತೊಡೆಯ ಬೋನ್ ಕ್ಯಾನ್ಸರ್ (ಆಸ್ಟಿಯೋಸರ್ಕೊಮಾ) ಕಾರಣಕ್ಕೆ ರೈನ್ ಬೋ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬರಲಾಯ್ತು. ಆರಂಭದಲ್ಲಿ ಬಾಲಕಿಗೆ ಕಿಮಿಯೋಥೆರಪಿ ಚಿಕಿತ್ಸೆ ನೀಡಲಾಯಿತಾದರೂ ಶಸ್ತ್ರಚಿಕಿತ್ಸೆ ಮಾಡುವುದು ತೀರಾ ಅನಿವಾರ್ಯವಾಗಿತ್ತು. ಆದರೆ ಅಷ್ಟರಲ್ಲಾಗಲೇ ಲಾಕ್ ಡೌನ್ ಘೋಷಣೆಯಾಗಿದ್ದರಿಂದಾಗಿ ಆರ್ಥೋಪೆಡಿಕ್ ತಜ್ಞರಿಗೆ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವುದು ಹೇಗೆ ಎಂಬ ಚಿಂತೆ ಕಾಡಲಾರಂಭಿಸಿತು. ಕಾರಣ ಶಸ್ತ್ರಚಿಕಿತ್ಸೆ ಎಂದರೆ ಕ್ಯಾನ್ಸರ್ ಪೀಡಿತ ಮೂಳೆಯನ್ನ ತೆಗೆದು ಅದರ ಬದಲಿಗೆ ಹಿಗ್ಗಬಹುದಾದಂತಹ ಕೃತಕ ಮೂಳೆಯನ್ನ ಜೋಡಿಸಬೇಕಾಗಿತ್ತು. ಅದೂ ಈ ಕೃತಕ ಮೂಳೆಯನ್ನ ತಯಾರು ಮಾಡುವ ಕೇಂದ್ರ ಚೆನ್ನೈನಲ್ಲಿದ್ದು, ಲಾಕ್ ಡೌನ್ ಪರಿಣಾಮ ಅವರೂ ಕೂಡಾ ತಮ್ಮ ಕೆಲಸವನ್ನ ನಿಲ್ಲಿಸಿ ಬಿಟ್ಟಿದ್ದರು. ಮುಚ್ಚಿದ್ದ ಕೇಂದ್ರದಿಂದ ಮೂಳೆ ತರಿಸಿ ಜೋಡಿಸಿ ಮಗುವಿಗೆ ಶೀಘ್ರವೇ ಶಸ್ತ್ರಚಿಕಿತ್ಸೆ ಮಾಡುವ ಅನಿವಾರ್ಯತೆ ವೈದ್ಯರಿಗೆ ಎದುರಾಗಿತ್ತು.
ಈ ಸಂದರ್ಭದಲ್ಲಿ ಕೈ ಚೆಲ್ಲಿ ಕುಳಿತುಕೊಳ್ಳದ ರೈನ್ ಬೋ ಮಕ್ಕಳ ಆಸ್ಪತ್ರೆಯ ತಜ್ಞರು ಹೇಗಾದರೂ ಸರಿ ಪ್ರಯತ್ನ ಮಾಡಿಯೇ ಬಿಡೋಣ ಎಂದು ಚೆನ್ನೈನಲ್ಲಿರುವ ಆ ಕೇಂದ್ರವನ್ನ ಸಂಪರ್ಕಿಸಿ, ಪರಿಸ್ಥಿತಿಯನ್ನ ವಿವರಿಸಿ ತಮಗೆ ಶೀಘ್ರವೇ ಕೃತಕ ಮೂಳೆಯನ್ನ ತಯಾರಿಸಿ ಕಳಿಸಲು ಕೋರಿಕೊಂಡರು. ಆದರೆ ಲಾಕ್ ಡೌನ್ ಇರುವುದುರಿಂದ ಇದು ಕಷ್ಟಸಾಧ್ಯ ಎಂಬ ಉತ್ತರ ಅಲ್ಲಿಂದ ಬಂದಿತು. ಇಷ್ಟಕ್ಕೂ ಸುಮ್ಮನಾಗದ ರೈನ್ ಬೋ ಮಕ್ಕಳ ಆಸ್ಪತ್ರೆಯವರು ನೇರವಾಗಿ ಅಲ್ಲಿನ ಸ್ಥಳೀಯ ಆಡಳಿತವನ್ನ ಸಂಪರ್ಕಿಸಿ ಅವರಿಗೆ ಮಗುವಿನ ಮೆಡಿಕಲ್ ಕಂಡೀಷನ್ ವಿವರಿಸಿ, ತಯಾರಿಕಾ ಕೇಂದ್ರವನ್ನ ತೆರೆಯಲು ಅನುಮತಿ ನೀಡಬೇಕು ಎಂದು ವಿನಂತಿಸಿಕೊಂಡರು. ಆ ಕೂಡಲೇ ಚೆನ್ನೈನ ಸ್ಥಳೀಯ ಆಡಳಿತ ಇದಕ್ಕೆ ಸ್ಪಂದಿಸಿ ಕೃತಕ ಮೂಳೆ ತಯಾರಿಕಾ ಕೇಂದ್ರದವರಿಗೆ ಆದ್ಯತೆಯ ಮೇರೆಗೆ ಈ ಕೆಲಸ ನಿರ್ವಹಿಸಿ ಕೊಡುವಂತೆ ಸೂಚಿಸಿತು. ಅದರಂತೆ ತಕ್ಷಣ ಅಗತ್ಯವಿರುವ ಕೃತಕ ಮೂಳೆಯನ್ನ ಕೇಂದ್ರದವರು ಸಿದ್ಧಪಡಿಸಿ ರೈನ್ ಬೋ ಆಸ್ಪತ್ರೆಗೆ ಕಳುಹಿಸಿ ಕೊಟ್ಟರು.
ಕೂಡಲೇ ಶಸ್ತ್ರಚಿಕಿತ್ಸೆ ಆರಂಭಿಸಿದ ರೈನ್ ಬೋ ಮಕ್ಕಳ ಆಸ್ಪತ್ರೆಯ ತಜ್ಞರು ಬಾಧಿತ ಕ್ಯಾನ್ಸರ್ ಗಡ್ಡೆಯ ಮೂಳೆಯನ್ನ ತೆಗೆದು ಆ ಜಾಗದಲ್ಲಿ ಹಿಗ್ಗಬಹುದಾದ ಕೃತಕ ಮೂಳೆಯನ್ನ ಜೋಡಿಸಿದರು. ನಿಧಾನಕ್ಕೆ ಕೆಲ ದಿನಗಳ ನಂತರ ಬಾಲಕಿ ನಡೆದಾಡಲಾರಂಭಿಸಿದಳು. ಅವಳು ಕೆಲ ಸಮಯ ವೈದ್ಯರ ನಿಗಾದಲ್ಲಿರಬೇಕಾಗಿದ್ದು, ಆ ನಂತರದಲ್ಲಿ ತಮ್ಮ ದೇಶಕ್ಕೆ ಹಿಂತಿರುಗುಬಹುದಾಗಿದೆ. ಬಾಲಕಿ ಬೆಳೆದಂತೆಲ್ಲಾ ಆಯಾ ವಯಸ್ಸಿಗನುಗುಣವಾಗಿ ಆಗಾಗ ಮೂಳೆಯನ್ನ ಬದಲಿಸಬೇಕಾದ ಅನಿವಾರ್ಯತೆ ಇರುತ್ತದೆ. ಕಾರಣ ಸಹಜ ಕಾಲಿನ ಅಳತೆಯಷ್ಟೇ ಶಸ್ತ್ರಚಿಕಿತ್ಸೆ ಮಾಡಿದ ಕಾಲು ಕೂಡಾ ಇರಬೇಕಾದದ್ದು ಅಗತ್ಯ. ಸಧ್ಯ ಅವಳು ಸಹಜವಾಗಿ ನಡೆಯಲಾರಂಬಿಸಿದ್ದು, ಚಿಕಿತ್ಸೆ ಸಂಪೂರ್ಣ ಯಶಸ್ಸು ಕಂಡಿದೆ.
ಈ ಕುರಿತು ಮಾತನಾಡಿದ ರೈನ್ ಬೋ ಆಸ್ಪತ್ರೆಯ ಪಿಡಿಯಾಟ್ರಿಕ್ ಆರ್ಥೊಪೆಡಿಕ್ ವಿಭಾಗದ ಮುಖ್ಯಸ್ಥ ಡಾ ಜಯಂತ್, ” ದೂರದ ಯೆಮೆನ್ ದೇಶದಿಂದ ನಮ್ಮ ಆಸ್ಪತ್ರೆಯ ಮೇಲೆ ವಿಶ್ವಾಸವಿಟ್ಟು ಬಂದಿದ್ದರು. ಹೀಗಿರುವಾಗ ನಾವು ಎದುರಾದ ಎಲ್ಲ ಸವಾಲುಗಳನ್ನ ಮೆಟ್ಟಿ ನಿಲ್ಲಲೇಬೇಕಾಗಿತ್ತು. ಮಗುವಿನ ಮುಖದಲ್ಲಿ ನಗು ತರುವುದಕ್ಕೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಿದೆವು. ಕೊನೆಗೂ ಅದು ಸಾಫಲ್ಯ ಕಂಡಿದೆ. ಸಧ್ಯ ಬಾಲಕಿ ಸಹಜವಾಗಿ ನಡೆಯುವಂತಾಗಿದ್ದಾಳೆ ಮತ್ತು ಸಮಸ್ಯೆ ಸಂಪೂರ್ಣ ಗುಣಮುಖವಾಗಿದೆ,” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರೈನ್ ಬೋ ಮಕ್ಕಳ ಆಸ್ಪತ್ರೆಯ ಉಪಾಧ್ಯಕ್ಷ ಹಾಗೂ ಬೆಂಗಳೂರು ವಿಭಾಗದ ಮುಖ್ಯಸ್ಥ ನೀರಜ್ ಲಾಲ್,” ನಿಜಕ್ಕೂ ಇದು ನಮಗೆ ದೊಡ್ಡ ಸವಾಲಾಗಿತ್ತು. ನಮ್ಮನ್ನ ನಂಬಿ ಅಷ್ಟು ದೂರದಿಂದ ಬಂದಿರುವಾಗ ನಾವು ಕೈಚೆಲ್ಲಿದರೆ ಅವರಿಗಾಗುವ ನಿರಾಸೆ ಅಷ್ಟಿಷ್ಟಲ್ಲ. ಅಷ್ಟಕ್ಕೂ ಚಿಕಿತ್ಸೆಯ ವಿಚಾರ ಬಂದಾಗ ರೈನ್ ಬೋ ಸದಾ ತನ್ನಿಂದಾಗುವ ಎಲ್ಲ ಪ್ರಾಮಾಣಿಕ ಪ್ರಯತ್ನಗಳನ್ನ ಮಾಡುತ್ತದೆ. ಅಂತಹ ಒಂದು ಪ್ರಯತ್ನ ಇದಾಗಿದ್ದು, ಈ ಯಶಸ್ಸಿನಲ್ಲಿ ಹಲವರ ಪಾತ್ರವಿದೆ,” ಎಂದರು.
ವೈದ್ಯರು, ಕೃತಕ ಮೂಳೆ ತಯಾರಕರು ಮತ್ತು ಆಡಳಿತ ವರ್ಗ ತಕ್ಷಣ ಸ್ಪಂದಿಸಿ, ಕಾರ್ಯ ನಿರ್ವಹಿಸಿದ್ದಕ್ಕೆ ಆಸ್ಟಿಯೊಸರ್ಕೊಮಾದಂತಹ ಕಾಯಿಲೆಗೆ ತಕ್ಷಣ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಸಾಧ್ಯವಾಗಿದೆ.
Click this button or press Ctrl+G to toggle between Kannada and English