ಮಂಗಳೂರು: ಕಳೆದ ಮಾರ್ಚ್ ತಿಂಗಳಲ್ಲಿ ಕೋವಿಡ್ ಕಾರಣದಿಂದ ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆ ಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಿದ ಬಳಿಕ ಅಲ್ಲಿದ್ದ ಹೊರ ರೋಗಿಗಳನ್ನು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು.
ಜಿಲ್ಲಾಡಳಿತ ಇಲ್ಲಿಂದ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದ ನಾಲ್ವರು ಬಡ ರೋಗಿಗಳನ್ನು ಆಸ್ಪತ್ರೆ ಆಂಬುಲೆನ್ಸ್ ನಲ್ಲಿ ತಂದು ಕಂಕನಾಡಿ ಮಾರ್ಕೆಟ್ ಬಳಿ ಬಿಟ್ಟುಹೋಗುವ ಮೂಲಕ ಅಮಾನವೀಯತೆ ಪ್ರದರ್ಶಿಸಿದೆ.
ಆ ಪೈಕಿ ಉಪ್ಪಿನಂಗಡಿಯ ರಘುರಾಮ, ಫರಂಗಿಪೇಟೆ ಪೊಳಲಿ ರಸ್ತೆಯ ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಎಂಬವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ ಈ ನಾಲ್ಕು ಮಂದಿಯನ್ನು ಆಸ್ಪತ್ರೆಯ ಸಿಬ್ಬಂದಿಯವರು ಕಂಕನಾಡಿಯ ಬಸ್ ತಂಗುದಾಣದಲ್ಲಿ ಬಿಟ್ಟು ಹೋಗಿದ್ದರೆನ್ನಲಾಗಿದೆ.
ಇದನ್ನು ಕಂಡ ಸ್ಥಳೀಯರು ಆಸ್ಪತ್ರೆಯವರನ್ನು ಸಂಪರ್ಕಿಸಿ ಮಾತನಾಡಿದಾಗ ಸಕಾರಾತ್ಮಕ ಉತ್ತರ ಸಿಗಲಿಲ್ಲ. ಹಾಗಾಗಿ ಸ್ಥಳೀಯ ಆಟೊ ರಿಕ್ಷಾ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳು ಊಟದ ವ್ಯವಸ್ಥೆ ಕಲ್ಪಿಸಿದ್ದರು. ತುಫೈಲ್ ಅಹ್ಮದ್ ಎಂಬವರು ಬೆಡ್‌ಶೀಟ್ ಮತ್ತು ಹೊದಿಕೆಯ ವ್ಯವಸ್ಥೆ ಕಲ್ಪಿಸಿದ್ದರು. ಅನಾಥ, ನಿರ್ಗತಿಕ ರೋಗಿಗಳಿಗೆ ನೆರವು ನೀಡುವಂತೆ ದ.ಕ. ಜಿಲ್ಲಾಧಿಕಾರಿ, ಮನಪಾ ಆಯುಕ್ತರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನವನ್ನೂ ಸೆಳೆಯಲಾಯಿತು.
ಕೊನೆಗೂ ಎಚ್ಚೆತ್ತ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಶುಕ್ರವಾರ ಸಂಜೆ ರೋಗಿಗಳನ್ನು ಇಎಸ್‍ಐ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೃದಯ ಖಾಯಿಲೆ, ಕಾಲು ನೋವು ಮತ್ತು ಇತರೆ ಖಾಯಿಲೆ ಗಳಿಂದ ಇವರು ಬಳಲುತ್ತಿದ್ದರು. ಮಳೆ, ಚಳಿಯ ಮಧ್ಯೆ ಬಡರೋಗಿಗಳು ಮಾರುಕಟ್ಟೆ ಜಗಲಿಯಲ್ಲಿ ಕೂತಿದ್ದರು. ಚಿಕಿತ್ಸೆ ನೀಡಲಾಗದೇ ವೃದ್ದ ರೋಗಿಗಳನ್ನು ಬೀದಿಗೆ ಬಿಟ್ಟ ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.
Click this button or press Ctrl+G to toggle between Kannada and English