ಚಿತ್ರದುರ್ಗ: ಹಲವಾರು ದಿನಗಳಿಂದ ಬಹುಜನರ ಬೇಡಿಕೆಯಾಗಿದ್ದ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿಯು 2021 ರ ಜನೇವರಿಯಲ್ಲಿ ಆರಂಭವಾಗುವ ಬಗ್ಗೆ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ರೈಲ್ವೆ ಅಧಿಕಾರಿಗಳು ಕಾಮಗಾರಿ ಆರಂಭವಾಗುವ ಬಗ್ಗೆ ಮಾಹಿತಿ ನೀಡಿದರು.
ಈಗಾಗಲೇ ಆರಂಭವಾಗಿರುವ ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ವಿತರಣೆ ಪ್ರಕ್ರಿಯೆ ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಮುಗಿಯಲಿದ್ದು, ನಂತರ ಕಾಮಗಾರಿಯ ಕುರಿತು ೨೦೨೧ ರ ಜನೇವರಿಯಲ್ಲಿ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಅಧಿಕಾರಿ ಶಶಿಧರ ಸಭೆಯಲ್ಲಿ ಹೇಳಿದರು.
ಜಿಲ್ಲಾಧಿಕಾರಿ ವಿನೂತ್ ಪ್ರಿಯಾ ಮಾತನಾಡಿ, 49.58 ಕಿ.ಮೀ. ರೈಲು ಮಾರ್ಗ ನಿರ್ಮಾಣಕ್ಕಾಗಿ 25 ಗ್ರಾಮಗಳ 444.12 ಎಕರೆ ಭೂ ಸ್ವಾಧೀನದ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಭೂ ಸ್ವಾಧೀನ ಕಾಯ್ದೆ 2013 ರ ಅನ್ವಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
Click this button or press Ctrl+G to toggle between Kannada and English