ಕೋವಿಡ್ ನೆಪದಲ್ಲಿ ಆಸ್ಟಿಯೋಪೊರೆಸಿಸ್ ನಿರ್ಲಕ್ಷಿಸಿದರೆ ಅಪಾಯ

4:40 PM, Wednesday, June 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Osteoporosisಬೆಂಗಳೂರು: ಜಗತ್ತಿನಾದ್ಯಂತ ಹರಡಿರುವ ಕೋವಿಡ್ ಸೋಂಕು ಹುಟ್ಟು ಹಾಕಿರುವ ಭಯದಿಂದಾಗಿ ಜನ ತಮಗಿರುವ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನ ಸಂಪೂರ್ಣವಾಗಿ ಮರೆತೇಬಿಟ್ಟಿದ್ದಾರೆ. ಇದರಲ್ಲಿ ಆಸ್ಟಿಯೋಪೊರೆಸಿಸ್ ಕೂಡಾ ಒಂದು. ಆಸ್ಟಿಯೊಪೊರೆಸಿಸ್ ಅಂದ್ರೆ ಮೂಳೆಗಳಲ್ಲಿ ಉಂಟಾಗುವ ರಂಧ್ರಗಳು ಹಾಗೂ ಇಂದರಿಂದ ಉಂಟಾಗುವ ಅಸ್ಥಿರತೆ ಎಂದು ಹೇಳಬಹುದು. ಇದರ ಪರಿಣಾಮವಾಗಿ ಮೂಳೆಗಳು ಸಂಪೂರ್ಣ ದೃಢತೆ ಕಳೆದುಕೊಂಡುಬಿಡುತ್ತವೆ. ಹೀಗಾದಾಗ ಮನೆಯಲ್ಲಿರುವ ವೃದ್ಧರು ಕೆಳಗೆ ಬಿದ್ದರೆ ಕೂಡಲೇ ಸೊಂಟ, ಮಣಿಕಟ್ಟು, ಬೆನ್ನು ಹುರಿ, ತಲೆ ಹೀಗೆ ಗಾಯಗಳಾಗುವುದು ಅಥವಾ ಮೂಳೆ ಮುರಿತ ಉಂಟಾಗವುದು ಸಾಮಾನ್ಯ. ಹೀಗಾಗಿ ಅವರ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಅತ್ಯಗತ್ಯ.

ಡಾ ಕುಮಾರದೇವ ಅರವಿಂದ ರಾಜಮಾನ್ಯ (ಮೂಳೆ ತಜ್ಞರು ಮತ್ತು ತಲೆ ಗಾಯ, ಸೊಂಟ, ಮಣಿಕಟ್ಟು, ಬೆನ್ನುಹುರಿ ಮತ್ತು ನೀ ಸ್ಪೋಟ್ರ್ಸ್ ಮೆಡಿಸಿನ್/ಆರ್ಥರೊಸ್ಕೊಪಿ ಸೇರಿದಂತೆ ಜಾಯಿಂಟ್ ರಿಪ್ಲೆಸ್‍ಮೆಂಟ್ ಶಸ್ತ್ರಚಿಕಿತ್ಸಕರು) ಹೇಳುವ ಪ್ರಕಾರ, “ಹಿರಿಯರು ಆಕಸ್ಮಿಕವಾಗಿ ಬಿದ್ದಾಗ ಆಸ್ಟಿಯೋಪೊರೆಸಿಸ್ ಅಥವಾ ಗಾಯಗಳು ಆಗುವುದು ಸಾಮಾನ್ಯ. ಈ ಗಾಯಗಳು ಮಹಿಳೆಯರಲ್ಲಿ ಶೇ.17.5 ಮತ್ತು ಪುರುಷರಲ್ಲಿ ಶೇ.6.1ರಷ್ಟು ಜೀವನ ಪರ್ಯಂತ ಕಾಡುತ್ತವೆ. ಜಗತ್ತಿನಾದ್ಯಂತ ಈ ರೀತಿಯ ಗಾಯಗಳು 2050ಕ್ಕೆ 6 ಮಿಲಿಯನ್ ಜನರಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ ಮತ್ತು ಈ ಸಂಖ್ಯೆ ಇನ್ನೂ ದ್ವುಗುಣಗೊಳ್ಳುವ ಸಾಧ್ಯತೆಯಿದ್ದು, ವೃದ್ಧರಲ್ಲಿ ಕಾಣಿಸಿಕೊಳ್ಳುವ ಆಸ್ಟಿಯೋಪೊರೆಸಿಸ್ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸೊಂಟದಲ್ಲಿ ಉಳುಕಿದರೆ ಶೇ.22 ಜನರಿಗೆ ಆಸರೆಯಿಲ್ಲದೇ ಜೀವನ ನಡೆಸುವುದೇ ಕಷ್ಟಸಾಧ್ಯವಾಗುತ್ತದೆ. ಒಂಟಿಯಾಗಿ ಬದುಕುತ್ತಿರುವ ವೃದ್ಧರು ಈ ರೀತಿಯ ಸಮಸ್ಯೆಗಳಿಗೆ ತುತ್ತಾದರೆ ಅವರ ನಿತ್ಯ ಜೀವನವೇ ಸಂಕಷ್ಟಕ್ಕೆ ಸಿಲುಕುತ್ತದೆ, ಎಂದರು.

ಉದಾಹರಣೆಗೆ 75 ವರ್ಷದ ವೃದ್ಧೆ ಅರುಂಧತಿಯವರು(ಹೆಸರು ಬದಲಿಸಲಾಗಿದೆ) ಕೆಳಗೆ ಬಿದ್ದ ಪರಿಣಾಮವಾಗಿ ಎಡ ಭಾಗದ ಸೊಂಟ ಉಳಿತಕ್ಕೊಳಗಾಗಿದ್ದರು. ಅವರು ಆಸ್ಟಿಯೋಪೊರೆಸಿಸ್ ಜೊತೆಗೆ ಸಂಧಿವಾತದಿಂದಲೂ ಬಳಲುತ್ತಿದ್ದರು. ಹೀಗಾಗಿ ಅವರ ಮೂಳೆಗಳು ಸಾಕಷ್ಟು ಬಲಹೀನಗೊಂಡಿದ್ದವು. ಈ ವೇಳೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ಮುರಿತಕ್ಕೊಳಗಾದ ಮೂಳೆಯನ್ನ ಸರಿಪಡಿಸಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ನಂತರ ಆರೈಕೆಯ ಸಮಯದಲ್ಲಿ ಅವರು ತೀವ್ರವಾದ ನೋವನ್ನ ಅನುಭವಿಸಲಾರಂಭಿಸಿದರು. ಆಗ ರೇಡಿಯೇಷನ್ ಪರೀಕ್ಷೆ ಮಾಡಲಾಗಿ ಮುರಿತದ ಭಾಗದಲ್ಲಿ ಹಾಕಿರುವ ಸ್ಕ್ರೂ ಕತ್ತರಿಸಿರುವುದು ಕಂಡುಬಂದಿತು. ಇದರಿಂದಾಗಿ ರೋಗಿಯ ಮೂಳೆಯ ಸದೃಢತೆ ಎಷ್ಟಿದೆ ಎಂಬುದು ತಿಳಿದುಬಂದಿತು. ಆಸ್ಟಿಯೊಸಿಂಥೆಸಿಸ್ ವಿಫಲಗೊಳ್ಳುವುದರ ಪರಿಣಾಮ ವೃದ್ಧರು ಮಾನಸಿಕ ಜೊತೆಗೆ ಆರ್ಥಿಕ ತೊಂದರೆಯನ್ನು ಅನುಭವಿಸುವಂತಾಗುತ್ತದೆ. ಅವರಿಗೆ ಮತ್ತೊಮ್ಮೆ ಮೂಳೆಯ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಿತು. ಈ ವೇಳೆ ಅವರ ಸಂಪೂರ್ಣ ನಡು ಭಾಗವನ್ನೆ ಬದಲಾಯಿಸಬೇಕಾದದ್ದು ಅಗತ್ಯವಾಗಿತ್ತು. ಅವರಿಗೆ ವಿಟಾಮಿನ್ ಡಿ ಮತ್ತು ಕ್ಯಾಲ್ಸಿಯಂ ಸಪ್ಲಿಮೆಂಟ್‍ಗಳು ಮತ್ತು ಪ್ಯಾರಾಥೈರಾಯಿಡ್ ಹಾರ್ಮೋನ್ ಇಂಜೆಕ್ಷನ್‍ಗಳನ್ನ ನೀಡಬೇಕಾಯಿತು,” ಎಂದು ಹೇಳುತ್ತಾರೆ ಡಾ ಕುಮಾರದೇವ ಅರವಿಂದ ರಾಜಮಾನ್ಯ.

ಈಗ ಅವರು ನೋವಿನಿಂದ ಪಾರಾಗಿದ್ದಾರೆ. ಎರಡು ಮೂರು ಬಾರಿ ಪ್ರಯಾಣ ಕೂಡಾ ಮಾಡಿದ್ದು ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಈ ಕುರಿತು ಅರುಂಧತಿ ಹೇಳುವುದು,”ನಾನು ಕೆಳಗೆ ಬಿದ್ದು ನನ್ನ ಸೊಂಟ ಮುರಿದಾಗ ಇನ್ನು ಮುಂದೆ ನಾನು ಮೊದಲಿನಂತೆ ನಡೆದಾಡುತ್ತೇನೆ ಎಂಬ ವಿಶ್ವಾಸವೇ ಹೊರಟು ಹೋಗಿತ್ತು. ನಾನು ಮೇಲಿಂದ ಮೇಲೆ ಶಸ್ತ್ರಚಿಕಕಿತ್ಸೆಗೆ ಒಳಗಾದಾಗಲೂ ವೈಟ್‍ಫಿಲ್ಡ್ ಮಣಿಪಾಲ್ ಆಸ್ಪತ್ರೆಯ ವೈದ್ಯರು, ನರ್ಸ್‍ಗಳು, ಫಿಜಿಯೋಥೆರಪಿಸ್ಟ್‍ಗಳು ನನಗೆ ಸಾಕಷ್ಟು ನೆರವಾದರು. ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದೆ ಅವರು. ಇದರಿಂದಾಗಿಯೇ ನಾನು ಪರಿಸ್ಥಿತಿಯನ್ನ ಧೈರ್ಯದಿಂದ ಎದುರಿಸಿದೆ,” ಎನ್ನುತ್ತಾರೆ.

ಆಸ್ಟಿಯೋಪೊರೆಸಿಸ್ ಎಂದರೇನು?

ಡಾ ಕುಮಾರದೇವ ಅರವಿಂದ ರಾಜಮಾನ್ಯ “ಆಸ್ಟಿಯೋಪೊರೆಸಿಸ್ ಎಂದರೆ ಮೂಳೆಗಳು ತಮ್ಮ ಸದೃಢತೆಯನ್ನ ಕಳೆದುಕೊಳ್ಳುವುದು. ಇದರ ಪರಿಣಾಮವಾಗಿ ಮೂಳೆ ಮುರಿತ ಉಂಟಾಗುತ್ತದೆ. ಈ ಲಕ್ಷಣವು ಮುಟ್ಟು ನಿಂತ ನಂತರದ ಮಹಿಳೆಯರಲ್ಲಿ, ಬೇಗ ವೃದ್ಧಾಪ್ಯಕ್ಕೆ ತುತ್ತಾಗುವವರಲ್ಲಿ, ಪೋಷಕಾಂಶ ಕಡಿಮೆ ಇರುವವರಲ್ಲಿ, ಧೂಮಪಾನ ಹಾಘೂ ಮಧ್ಯಪಾನ ಮಾಡುವವರಲ್ಲಿ, ಸಾಕಷ್ಟು ದೈಹಿಕ ಕಸರತ್ತು ಮಾಡದವರು, ಡ್ರಗ್ಸ್‍ಗೆ ದಾಸರಾದವರು, ಹೀಗೆ ಇಂತವರಲ್ಲಿ ಕಂಡುಬರುತ್ತದೆ. ಒಂದು ಅಧ್ಯಯನದ ಪ್ರಕಾರ 30 ವರ್ಷಗಳ ನಂತರ ಮುಟ್ಟು ನಿಂತ ಮಹಿಳೆಯರಲ್ಲಿ ಶೇ.35ರಷ್ಟು ಕಾರ್ಟಿಕಲ್ ಬೋನ್ ಮತ್ತು ಶೇ.50ರಷ್ಟು ಕ್ಯಾನ್ಸೆಲೆಸ್ ಬೋನ್ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಮುಟ್ಟುನಿಂತ ಎಲ್ಲ ಮಹಿಳೆಯರು ಆಸ್ಟಿಯೋಪೊರೆಸಿಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯಕ. ಇದಕ್ಕಾಗಿಯೇ ಡೆಕ್ಸಾ ಸ್ಕ್ಯಾನ್ ಮಾಡಲಾಗುತ್ತದೆ.

ವೈದ್ಯಕೀಯ ಚಿಕಿತ್ಸೆ

ಆಸ್ಟಿಯೋಪೊರೆಸಿಸ್ ಸಮಸ್ಯೆ ಕಾಡದಂತೆ ನೋಡಿಕೊಳ್ಳಬೇಕಂದರೆ ಆರೋಗ್ಯಪೂರ್ಣ ಜೀವನಶೈಲಿಯನ್ನ ರೂಢಿಸಿಕೊಳ್ಳಬೇಕು. ಕ್ಯಾಲ್ಸಿಯಂ ಮತ್ತು ವಿಟಾಮಿನ್-ಡಿ ಉಳ್ಳ ಆಹಾರ ಪದಾರ್ಥಗಳನ್ನ ಸೇವಿಸಬೇಕು. ದೈಹಿಕ ಕಸರತ್ತು ಮಾಡುವುದು, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

ಮುಂಜಾಗ್ರತಾ ಕ್ರಮಗಳು

ಈ ಸಮಸ್ಯೆಯಿಂದ ಬಳಲುತ್ತಿರುವವರು ಮನೆಯಲ್ಲಿ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಬೇಕು. ಮೆಟ್ಟಿಲುಗಳಿಗೆ ಸೂಕ್ತ ಹಿಡಿಕೆಗಳನ್ನ ಹಾಕಿಸುವುದು, ಸ್ನಾನದ ಕೋಣೆಯಲ್ಲಿ ಆಧಾರಕ್ಕೆ ಕೊಂಡಿಗಳನ್ನ ಹಾಕಿಸುವುದು, ಕಾಲು ಜಾರದಂತೆ ಮುಂಜಾಗ್ರತೆ ವಹಿಸುವುದು ಹೀಗೆ ಕೆಲ ಎಚ್ಚರಿಕೆಗಳು ಅಗತ್ಯ. ಕೆಲ ವ್ಯಾಯಾಮಗಳ ಮೂಲಕ ಬ್ಯಾಲೆನ್ಸ್ ಅಭ್ಯಾಸ ಮಾಡಬೇಕು. ಅಪಾಯ ಎದುರಾಗದಂತೆ ಎಲ್ಲಾ ರೀತಿಯ ಸುರಕ್ಷಾ ಸಾಧನಗಳನ್ನ ಅಳವಡಿಸಿಕೊಳ್ಳೂವ ಮೂಲಕ ಆಸ್ಟಿಯೋಪೊರೆಸಿಸ್ ವಿರುದ್ಧ ಹೋರಾಡಬಹುದಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English