ಮಂಗಳೂರು : ದ.ಕ. ಜಿಲ್ಲೆಯಲ್ಲಿ ಹೊಸದಾಗಿ 12 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, ಇವರಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್ಸೈ ಕೂಡ ಸೇರಿದ್ದಾರೆ.
ಇದೇ ಮೊದಲ ಬಾರಿಗೆ ಒಂದೇ ದಿನ 45 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಉಳ್ಳಾಲ ಪೊಲೀಸ್ ಠಾಣಾ ಎಸ್‌ಐ ಸೇರಿದಂತೆ 12 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 465ಕ್ಕೆ ಏರಿದೆ.
ಬುಧವಾರ ದೃಢಪಟ್ಟ ಪ್ರಕರಣಗಳ ಪೈಕಿ ನಾಲ್ಕು ಮಂದಿ (29 ವರ್ಷದ ಯುವಕ, 25, 51, 24 ವರ್ಷದ ಮಹಿಳೆಯರು) ಶಾರ್ಜಾದಿಂದ ಬಂದು ಕ್ವಾರಂಟೈನ್ ಇದ್ದವರಾಗಿದ್ದರೆ, ಉಳಿದ ಎಂಟು ಮಂದಿಗೆ ಪ್ರಯಾಣ ಇತಿಹಾಸವೇ ಇಲ್ಲದೆ ಸೋಂಕು ಹರಡಿದೆ. ಮೂಲವೇ ಗೊತ್ತಾಗದೆ ಒಂದೇ ದಿನ ಇಷ್ಟು ಮಂದಿಗೆ ಸೋಂಕು ಹರಡಿದ್ದು ಜಿಲ್ಲೆಯಲ್ಲಿ ಇದೇ ಮೊದಲು. ಇವರಲ್ಲಿ ಏಳು ಮಂದಿ ಮಂಗಳೂರು ನಿವಾಸಿಗಳಾಗಿದ್ದರೆ, ಒಬ್ಬರು ಪುತ್ತೂರಿನವರು, ಎಲ್ಲರೂ ಪುರುಷರೇ ಆಗಿದ್ದಾರೆ.
ಪ್ರಸ್ತುತ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 155 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಬಹುತೇಕರ ಆರೋಗ್ಯ ಸ್ಥಿರವಾಗಿದೆ. ಕೋವಿಡ್ ಸೋಂಕಿತ ನ್ಯುಮೋನಿಯಾದಿಂದ ಬಳಲುತ್ತಿರುವ 41 ವರ್ಷದ ವ್ಯಕ್ತಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿರುವ 57 ವರ್ಷದ ಮಹಿಳೆಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
45 ಮಂದಿ ಗುಣಮುಖ: ಇದೇ ಮೊದಲ ಬಾರಿಗೆ ಒಂದೇ ದಿನ ದೊಡ್ಡ ಸಂಖ್ಯೆಯಲ್ಲಿ 45 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ವರ್ಷದ ಮಗುವಿನಿಂದ ಹಿಡಿದು 61 ವರ್ಷದ ಹಿರಿಯ ನಾಗರಿಕರೊಬ್ಬರು ಕೂಡ ಗುಣಮುಖರಾಗಿ ದ್ದಾರೆ. ಬುಧವಾರ ಕೊರೋನ ದಿಂದಾಗಿ 67 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ.
ಬಿಡುಗಡೆಗೊಂಡ ಬಹುತೇಕರು ಯುವಕರೇ ಆಗಿದ್ದಾರೆ. ಈ ಮೂಲಕ ಇದುವರೆಗೆ ಒಟ್ಟು 301 ಮಂದಿ ಗುಣಮುಖರಾದಂತಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಗೂ ಕೊರೋನ ಸೋಂಕು ದಾಳಿ ಇಟ್ಟಿದ್ದು, ಇಲ್ಲಿನ ಪೋಲಿಸ್ ಅಧಿಕಾರಿಗೆ ಕೊರೋನ ಸೋಂಕು ತಗುಲಿದೆ.
ಉಳ್ಳಾಲ ಠಾಣೆಯಲ್ಲಿ ಪಿಎಸ್ಸೈ ಒಬ್ಬರಿಗೆ ಕೊರೋನ ಸೋಂಕು ತಗುಲಿದೆ. ಕೇರಳ ಗಡಿಭಾಗ ತಲಪಾಡಿಯ ಚೆಕ್‌ಪೋಸ್ಟ್ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿಂದಲೇ ಈ ಸೋಂಕು ಹರಡಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಪಿಎಸ್ಸೈಯಲ್ಲಿ ಕೊರೋನ ಸೋಂಕು ಪತ್ತೆಯಾದ ಕಾರಣ ಉಳ್ಳಾಲ ಠಾಣೆಯನ್ನು ಸೀಲ್‌ಡೌನ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಠಾಣೆಯ ಉಪ ನಿರೀಕ್ಷಕರಲ್ಲಿ ಕೊರೋನ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಠಾಣೆಯ 50ಕ್ಕೂ ಅಧಿಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಈ ಘಟನಾವಳಿಗಳಿಂದ ಪೊಲೀಸ್ ಸಿಬ್ಬಂದಿಯ ಮನೆಯವರು ಆತಂಕಕ್ಕೊಳಗಾಗಿದ್ದಾರೆ. ಪೊಲೀಸರಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುವ ಭೀತಿ ಉಂಟಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಉಳ್ಳಾಲದಲ್ಲಿ ಮತ್ತೆ ಕೊರೋನ ಆತಂಕ ಮನೆ ಮಾಡಿದೆ.
Click this button or press Ctrl+G to toggle between Kannada and English