ಮಂಗಳೂರು :ಡಿ.ವೈ.ಎಫ್.ಐ.ರಾಜ್ಯ ಸಮಿತಿ ವತಿಯಿಂದ ನಿರುದ್ಯೊಗಿಗಳಿಗೆ ಉದ್ಯೋಗ ಒದಗಿಸಿ ಕೊಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯನ್ನುದ್ದೇಷಿಸಿ ಮಾತನಾಡಿದ ಡಿ.ವೈ.ಎಫ್.ಐ. ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ವಿದ್ಯಾವಂತ ನಿರುದ್ಯೋಗಿ ಯುವಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಮ್ಮ ಸರ್ಕಾರವು ಈ ಬಗ್ಗೆ ಯಾವುದೇ ಚಿಂತನೆ ನಡೆಸದೆ ಇರುವುದರಿಂದ ನಮ್ಮ ಯುವಕರು ಹೊಟ್ಟೆಪಾಡಿಗಾಗಿ ಅಪರಾಧ ಚಟುವಟಿಕೆಗಳಂತಹ ಅನ್ಯ ಮಾರ್ಗವನ್ನು ಅನುಸರಿಸುವ ಅಪಾಯ ಎದುರಾಗಿದೆ. ಈ ಅಪಾಯದಿಂದ ಹೊರಬರಲು ಸರ್ಕಾರವು ಯುವಕರಿಗೆ ಉದ್ಯೋಗ ನೀಡುವ ಅಥವಾ ಸೂಕ್ತವಾದ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.
ಬಹುರಾಷ್ಟ್ರೀಯ ಕಂಪನಿಗಳು ಹೊರಗುತ್ತಿಗೆಯ ಮುಖಾಂತರ ನಮ್ಮ ಯುವಕರನ್ನು ನೇಮಿಸಿ ಮನಬಂದಾಗ ಅವರನ್ನು ಕೆಲಸದಿಂದ ವಜಾಗೊಳಿಸುತ್ತಾರೆ. ಇದರಿಂದ ಯುವಕರು ಉದ್ಯೋಗ ಭದ್ರತೆ ಇಲ್ಲದೇ ಆ ಕಂಪನಿಗಳಲ್ಲಿ ಜೀತದಾಳುಗಳಂತೆ ದುಡಿಯಬೇಕಾಗುತ್ತದೆ. ನಮ್ಮ ರಾಜ್ಯದಲ್ಲಿ 1,80,000 ಸರ್ಕಾರಿ ಹುದ್ದೆಗಳು ಹಾಗು ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 15 ಲಕ್ಷ ಹುದ್ದೆಗಳು ಖಾಲಿ ಇದ್ದರು ನಮ್ಮ ಸರ್ಕಾರವು ಈ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ. ಈ ನೇಮಕಾತಿಯನ್ನು ಮಾಡಿದಲ್ಲಿ ನಮ್ಮ ರಾಜ್ಯ, ರಾಷ್ಟ್ರ ಮಟ್ಟದಲ್ಲಿನ ನಿರುದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ನಿವಾರಣೆಯಾಗಬಲ್ಲುದು ಎಂದರು.
ಸರ್ಕಾರದ ಈ ಧೋರಣೆಯಿಂದ ಯುವಕರ ಬದುಕು ಛಿದ್ರವಾಗುತ್ತಿದೆ. ಇಂದು ನಿರುದ್ಯೋಗಿ ಯುವಕರನ್ನು ದುರುಪಯೋಗಿಸಿಕೊಳ್ಳಲಾಗುತ್ತಿದೆ. ಇಂದು ಹೆಚ್ಚಿನ ಎಲ್ಲಾ ಕಂಪನಿಗಳು ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದು, ಅವರಿಗೆ ಸೂಕ್ತವಾದ ಯಾವುದೇ ಸೌಲಭ್ಯವನ್ನು ನೀಡುತ್ತಿಲ್ಲ. ಕಾರ್ಮಿಕರು ಸೌಲಭ್ಯಕ್ಕಾಗಿ ಆಗ್ರಹಿಸಿದಾಗ ಕಂಪನಿಯು ತಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಅವರ ಸಮಸ್ಯೆಗಳೇನಿದ್ದರೂ ಗುತ್ತಿಗೆದಾರರಿಗೆ ಸಂಬಂದಪಟ್ಟದೆಂಬಂತೆ ವರ್ತಿಸುತಿದೆ. ಈ ಎಲ್ಲಾ ಸಮಸ್ಯೆಗಳನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ವಿಧಾನ ಸೌದದ ಎದುರು ಎಲ್ಲಾ ನಿರುದ್ಯೊಗಿಗಳು ಡಿ.ವೈ.ಎಫ್.ಐ.ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
Click this button or press Ctrl+G to toggle between Kannada and English