‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆ ನವೆಂಬರ್ ವರೆಗೆ ವಿಸ್ತರಣೆ

11:15 PM, Tuesday, June 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

Narendra modi ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆಯನ್ನು ದೀಪಾವಳಿಯಿಂದ ಆಯುಧಪೂಜೆಯವರೆಗೆ ಅಂದರೆ, ನವೆಂಬರ್ ಅಂತ್ಯದವರೆಗೆ ವಿಸ್ತರಿಸುವುದಾಗಿ ಮೋದಿ ಪ್ರಕಟಿಸಿದರು.

ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಬಡವರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಒಂದು ಕೆ.ಜಿ. ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ದೇಶದ 80 ಕೋಟಿ ಜನರಿಗೆ ಇದರ ಲಾಭವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕೊರೋನಾ ವೈರಸ್ ಸೋಂಕನ್ನು ಜನರು ಹಗುರವಾಗಿ ತೆಗೆದುಕೊಳ್ಳಬಾರದು. ಅನ್ಲಾಕ್ ಘೋಷಣೆ ಆದ ಬಳಿಕ ಜನರು ವೈಯಕ್ತಿಕವಾಗಿ ಬಹಳ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಮನಿಸಿದ್ದೇನೆ. ಇಂಥ ಧೋರಣೆ ತರವಲ್ಲ. ಜನರು ಕೊರೋನಾ ವೈರಸ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದಲ್ಲಿ ಲಾಕ್‌ಡೌನ್‌ ಪರಿಣಾಮಗಳನ್ನು ಜನರು ಎದುರಿಸುತ್ತಿದ್ದಾರೆ. ಜೊತೆಗೆ, ಮಳೆಗಾಲ ಆರಂಭವಾಗುತ್ತಿದೆ. ಈಗ ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಕೆಲಸವಿರುತ್ತದೆ. ಇತರ ಕ್ಷೇತ್ರಗಳಲ್ಲಿ ಸ್ವಲ್ಪ ವಿರಾಮವಿರುತ್ತದೆ. ಅಲ್ಲದೆ, ನಿಧಾನವಾಗಿ ಹಬ್ಬದ ವಾತಾವರಣವೂ ರಂಗೇರುತ್ತಿದೆ. ಜುಲೈ 15ಕ್ಕೆ ಗುರುಪೂರ್ಣಿಮೆ ಬರುತ್ತಿದೆ. ಅದರ ನಂತರ ಶ್ರಾವಣ, ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 15, ರಾಖಿ ಹಬ್ಬ, ದಸರಾ ದೀಪಾವಳಿಯಂತಹ ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ಸಂದರ್ಭದಲ್ಲಿ ಅಗತ್ಯಗಳು ಮತ್ತು ಖರ್ಚುಗಳು ಹೆಚ್ಚಾಗುತ್ತವೆ. ಆದ್ದರಿಂದ ದೇಶದ 80 ಕೋಟಿ ಜನರಿಗೆ ಉಚಿತ ರೇಷನ್ ನೀಡುವ ಯೋಜನೆ ನವೆಂಬರ್‌ವರೆಗೆ ಮುಂದುವರಿಯಲಿದೆ. ಇದಕ್ಕಾಗಿ 90 ಸಾವಿರ ಕೋಟಿಗಿಂತ ಹೆಚ್ಚು ಖರ್ಚಾಗಲಿದೆ ಎಂದರು.

ಕಳೆದ ಮೂರು ತಿಂಗಳ ವೆಚ್ಚ ಸೇರಿಸಿದರೆ ಒಂದೂವರೆ ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದರು.ಲಾಕ್‌ಡೌನ್‌ ಅವಧಿಯಲ್ಲಿ ದೇಶದ 80 ಕೋಟಿ ಜನರಿಗೆ ಉಚಿತ ರೇಷನ್ ವಿತರಿಸುವುದು ಇಡೀ ವಿಶ್ವದ ಹುಬ್ಬೇರಿಸುವಂತೆ ಮಾಡಿದೆ. ಇದು ಅಮೆರಿಕದ ಪೂರ್ಣ ಜನರಿಗಿಂತ ಎರಡೂವರೆ ಪಟ್ಟು ಹೆಚ್ಚಿದ್ದು, ಬ್ರಿಟನ್ ಜನಸಂಖ್ಯೆಗಿಂತ 12 ಪಟ್ಟು ಮತ್ತು ಯೂರೋಪಿಯನ್‌ ದೇಶದ ಜನಸಂಖ್ಯೆಯ 2 ಪಟ್ಟು ಜನರಿಗೆ ಉಚಿತ ರೇಷನ್ ನೀಡಿದೆ. ಸರಿಯಾದ ಸಮಯದಲ್ಲಿ ನಿರ್ಧಾರ ಮಾಡುವುದರಿಂದ ಸಮಸ್ಯೆ ಎದುರಿಸುವ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.

ದೇಶಾದ್ಯಂತ ‘ಒಂದು ದೇಶ ಒಂದು ರೇಷನ್ ಕಾರ್ಡ್’ ವ್ಯವಸ್ಥೆ ಜಾರಿಯಾಗುತ್ತಿದೆ. ಇದರಿಂದ ಬಡವರಿಗೆ ದೊಡ್ಡ ಲಾಭವಾಗಲಿದೆ. ಉದ್ಯೋಗ ಹುಡುಕಿ ಇತರ ಸ್ಥಳಗಳಿಗೆ ವಲಸೆ ಹೋಗುವವರಿಗೆ ನೆರವಾಗಲಿದೆ ಎಂದರು.

ಕಳೆದ ಮೂರು ತಿಂಗಳಲ್ಲಿ 9 ಕೋಟಿ ರೈತರ ಖಾತೆಗೆ 18 ಸಾವಿರ ಕೋಟಿ ರೂ. ಜಮೆ ಆಗಿದೆ. ಇದಕ್ಕಾಗಿ ಸರ್ಕಾರ 15 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ ಎಂದು ಮಾಹಿತಿ ನೀಡಿದರು.

ಸರ್ಕಾರ ಈ ಸಾಧನೆಯ ಶ್ರೇಯಸ್ಸು ಎರಡು ವರ್ಗದವರಿಗೆ ಸೇರುತ್ತದೆ. ಶ್ರಮಿಕ ಕೃಷಿಕರು ಮತ್ತು ಪ್ರಾಮಾಣಿಕ ತೆರಿಗೆ ಕಟ್ಟುವವರು. ಇವರಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ನಮ್ಮ ಪ್ರಯತ್ನ ಹೆಚ್ಚಿಸುತ್ತೇವೆ. ಗರೀಬ್‌, ಅವಕಾಶ ವಂಚಿತರನ್ನು ಸಶಕ್ತರನ್ನಾಗಿಸಲು ನಿರಂತರ ಕೆಲಸ ಮಾಡುತ್ತೇವೆ. ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತೇವೆ. ಸ್ವಾವಲಂಬಿ ಭಾರತಕ್ಕಾಗಿ ದಿನರಾತ್ರಿ ದುಡಿಯುತ್ತೇವೆ. ಸ್ಥಳೀಯರಿಗಾಗಿ ಧ್ವನಿಯಾಗುತ್ತೇವೆ ಎಂದು ಭರವಸೆ ನೀಡಿದರು.

ಇತರ ದೇಶಗಳ ಅಂಕಿ ಅಂಶಗಳಿಗೆ ಹೋಲಿಸಿದರೆ ದೇಶದಲ್ಲಿ ಕೊರೋನಾ ನಿವಾರಣೆಯ ಸ್ಥಿತಿಗತಿ ಉತ್ತಮವಾಗಿದೆ. ಸಮಯಕ್ಕೆ ಸರಿಯಾಗಿ ಕೈಗೊಂಡಿರುವ ಲಾಕ್‌ಡೌನ್ ಮತ್ತು ಇತರ ನಿರ್ಧಾರಗಳು ಲಕ್ಷಾಂತರ ಜನರ ಜೀವ ಉಳಿಸಿದೆ. ಆದರೆ, ಈಗಲೂ ಜನರು ಬೇಜವಾಬ್ದಾರಿತನ ತೋರುತ್ತಿದ್ದಾರೆ, ಕಂಟೈನ್ಮೆಂಟ್‌ ವಲಯಗಳಿಗೆ ಹೆಚ್ಚಿನ ಗಮನ ನೀಡಬೇಕು. ನಿಯಮ ಪಾಲಿಸದವರನ್ನು ತಡೆಯಬೇಕು, ದಂಡ ವಿಧಿಸಬೇಕು ಎಂದು ಸಲಹೆ ನೀಡಿದರು.

ದೇಶದ ನಿಯಮಗಳು ಎಲ್ಲರಿಗೂ ಒಂದೇ. ಇದು ಪ್ರಧಾನಿಗೆ ಕೂಡ ಅನ್ವಯವಾಗುತ್ತದೆ. ಬಲ್ಗೇರಿಯಾ ದೇಶದ ಪ್ರಧಾನಿ ಬಾಯ್ಕೊ ಬೊರಿಸೊವ್ ಅವರು ಮಾಸ್ಕ್ ಧರಿಸದಿರುವುದಕ್ಕೆ 13 ಸಾವಿರ ದಂಡ ವಿಧಿಸಲಾಗಿತ್ತು. ಇದು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English