ಉಡುಪಿ : ಉಡುಪಿ ಜಿಲ್ಲೆಯ ಕೋಟ ಸಮೀಪದ ಮಣೂರಿನ ವಾಸುದೇವ ಮಯ್ಯ ಅವರು ಸೋಮವಾರ ಬೆಂಗಳೂರಿನ ಉತ್ತರಹಳ್ಳಿ ಸಮೀಪ ಆತ್ಮ ಹತ್ಯೆಗೆ ಶರಣಾಗಿದ್ದಾರೆ.
ಗುರು ರಾಘವೇಂದ್ರ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾಗಿರುವ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಮಾಜೀ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ (CEO) ಮಯ್ಯರು ಈ ವಿಚಾರಕ್ಕೆ ಸಂಬಂಧಿಸಿಯೇ ಆತ್ಯಹತ್ಯೆ ಮಾಡಿಕೊಂಡಿರಬಹುದೆಂಬ ಗುಮಾನಿಗಳು ಇದೀಗ ವ್ಯಕ್ತವಾಗಿವೆ.
ಬೆಂಗಳೂರಿನ ಉತ್ತರಹಳ್ಳಿ ಬಳಿ ಇರುವ ಪೂರ್ಣಪ್ರಜ್ಞಾ ಲೇ ಔಟ್ ನಲ್ಲಿ ರಸ್ತೆ ಬದಿಯಲ್ಲೇ ಕಾರನ್ನು ನಿಲ್ಲಿಸಿ ಅದರೊಳಗೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೀಗ ಲಭಿಸಿದೆ.
ಬಸವನಗುಡಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರದ ಆರೋಪಗಳು ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬ್ಯಾಂಕ್ ಹಾಗೂ ವಾಸುದೇವ ಮಯ್ಯ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿತ್ತು.
ಉಡುಪಿ ಜಿಲ್ಲೆಯ ಕೋಟ ಸಮೀಪದ ಮಣೂರಿನವರಾಗಿದ್ದ ವಾಸುದೇವ ಮಯ್ಯ ಅವರು ಯಕ್ಷಗಾನದ ಕಡೆಗೆ ಅಪಾರ ಒಲವುಳ್ಳವರಾಗಿದ್ದರು.
ಕಲಾ ಪೋಷಕರೂ ಆಗಿದ್ದ ಮಯ್ಯ ಅವರು ಉತ್ತಮ ಯಕ್ಷಗಾನ ಪ್ರಸಂಗಕರ್ತರಾಗಿಯೂ ಈ ವಲಯದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.
‘ಇಂದ್ರನಾಗ’, ‘ಪುಷ್ಪ ಸಿಂಧೂರಿ’, ‘ದೇವ ಗಂಗೆ’, ‘ಪೂರ್ವಿ ಕಲ್ಯಾಣಿ’ ಹಾಗೂ ‘ಸೂರ್ಯ ಸಂಕ್ರಾಂತಿ’ ಪ್ರಸಂಗಗಳನ್ನು ಇವರು ರಚಿಸಿದ್ದರು. ಈ ಎಲ್ಲಾ ಪ್ರಸಂಗಗಳನ್ನು ಪ್ರತೀ ವರ್ಷದ ಪೆರ್ಡೂರು ಮೇಳದ ತಿರುಗಾಟದಲ್ಲಿ ಆಡಲಾಗುತ್ತಿತ್ತು.
Click this button or press Ctrl+G to toggle between Kannada and English