ಬೆಂಗಳೂರು :ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಮೂಡಿದ್ದ ಕುತೂಹಲಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ಸುಮಾರು 40 ವರ್ಷಗಳ ಕಾಲ ಭಾರೀ ಪರಿಶ್ರಮ ಪಟ್ಟು ತಾನೇ ಕಟ್ಟಿದ ಮನೆಯಿಂದ ಯಡಿಯೂರಪ್ಪ ಹೊರ ನಡೆದಿದ್ದಾರೆ. ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ವಿಧಾನಸೌಧಕ್ಕೆ ತೆರಳಿದ ಯಡಿಯೂರಪ್ಪ ಸ್ಪೀಕರ್ ಬೋಪಯ್ಯಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ.
ರಾಜೀನಾಮೆ ನೀಡುವುದಕ್ಕೂ ಮುನ್ನ ಯಡಿಯೂರಪ್ಪ ಫ್ರೀಡಂ ಪಾರ್ಕ್ ನಲ್ಲಿ ತನ್ನ ಅಭಿಮಾನಿಗಳನ್ನುದ್ದೇಶಿಸಿ ಭಾವುಕರಾಗಿ ಮಾತನಾಡಿದರು ಮತ್ತು ಅವರೊಂದಿಗೆ ಪಾದಯಾತ್ರೆಯ ಮೂಲಕ ವಿಧಾನಸೌಧಕ್ಕೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸ್ಪೀಕರ್ ಕೆ.ಜೆ.ಬೋಪಯ್ಯ ಅವರಿಗೆ ಸಲ್ಲಿಸಿದರು. ರಾಜೀನಾಮೆ ನೀಡುವ ವೇಳೆ ಯಡಿಯೂರಪ್ಪ ಅವರೊಂದಿಗೆ ಮಾಜಿ ಸಂಸದ ವಿ.ಧನಂಜಯ್ ಕುಮಾರ್, ಬಸವರಾಜು, ಬಿ.ಪಿ.ಹರೀಶ್, ಸಂಸದ ರಾಘವೇಂದ್ರ, ಶಾಸಕರಾದ ನೆಹರೂ ಓಲೆಕಾರ್, ಭಾರತಿ ಶೆಟ್ಟಿ, ಎಂ.ಡಿ ಲಕ್ಷ್ಮಿ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಗಣಿ ಹಗರಣದ ಆರೋಪದ ಮೇಲೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ಬಿಜೆಪಿ ಯಲ್ಲಿ ಸೂಕ್ತ ಸ್ಥಾನಮಾನ ಲಭಿಸದಿದ್ದರೆ ಪಕ್ಷವನ್ನು ಬಿಡುವುದಾಗಿ ಸೂಚನೆ ನೀಡುತ್ತಲೇ ಬಂದಿದ್ದರು. ಈ ಸೂಚನೆಯ ನಂತರವೂ ಬಿಜೆಪಿ ಹೈಕಮಾಂಡ್ ಅವರಿಗೆ ಯಾವುದೇ ಸ್ಥಾನಮಾನ ನೀಡದೆ ಇದ್ದುದರಿಂದ ಆಕ್ರೋಶಗೊಂಡ ಬಿಎಸ್‌ವೈ ಇದೀಗ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಲ್ಲದೇ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆಯನ್ನು ನೀಡುವ ಮೂಲಕ ಬಿಜೆಪಿ ನಂಟನ್ನು ಕಡಿದುಕೊಂಡಿದ್ದಾರೆ. ಅಲ್ಲದೆ ಬಿಜೆಪಿ ಗೆ ಸಡ್ಡು ಹೊಡೆಯಲು ಈಗಾಗಲೇ ತಮ್ಮದೇ ಆದ ಕರ್ನಾಟಕ ಜನತಾ ಪಕ್ಷ ಎಂಬ ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದು ಡಿಸೆಂಬರ್ 9ರಂದು ಹಾವೇರಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಕೆಜಿಪಿಯ ಅಧ್ಯಕ್ಷರಾಗಿ ಅಧಿಕಾರ ವಹಿಸುವ ಮೂಲಕ ಬಿಜೆಪಿಗೆ ಎದುರಾಳಿಯಾಗಲಿದ್ದಾರೆ.
Click this button or press Ctrl+G to toggle between Kannada and English