ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮೆರೆದಿದ್ದಾರೆ. ಬಂಡಿಪೊರ ಪ್ರದೇಶದಲ್ಲಿ ಉಗ್ರಗಾಮಿಗಳು ಬಿಜೆಪಿಯ ಸ್ಥಳೀಯ ನಾಯಕ ವಾಸೀಂ ಅಹ್ಮದ್ ಬಾರಿ ಮತ್ತು ಅವರ ಕುಟುಂಬ ಸದಸ್ಯರನ್ನು ಬುಧವಾರ ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ವಾಸೀಂ ಜತೆಗೆ ಅವರ ಸೋದರ ಉಮರ್ ಬಾರಿ ಮತ್ತು ತಂದೆ ಬಶೀರ್ ಅಹ್ಮದ್ ಕೂಡ ಹತ್ಯೆಗೀಡಾಗಿದ್ದಾರೆ.
ವಾಸೀಂ ಅಹ್ಮದ್ ಅವರು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಬಂಡಿಪೊರದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಈ ಮೂವರೂ ತಮ್ಮ ಅಂಗಡಿಯಲ್ಲಿ ಇದ್ದ ವೇಳೆಗೆ ನುಗ್ಗಿದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಈ ಅಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲೇ ಇದೆ.
ವಾಸೀಂ ಸ್ಥಳದಲ್ಲೇ ಸಾವನ್ನಪ್ಪಿದರೆ ತೀವ್ರವಾಗಿ ಗಾಯಗೊಂಡಿದ್ದ ಅವರ ಸೋದರ ಮತ್ತು ತಂದೆ ಬಂಡಿಪೊರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟರು.
ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ತಿಳಿಸಿದ್ದಾರೆ. ಘಟನೆಯನ್ನು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ.
Click this button or press Ctrl+G to toggle between Kannada and English