ಸರ್ವೇಗೆ ಬಂದ ತಹಶೀಲ್ದಾರ್ ಗೆ ಚಾಕುವಿನಿಂದ ಇರಿದು ಕಾಡಿನಲ್ಲಿ ಅಡಗಿ ಕುಳಿತ ನಿವೃತ್ತ ಶಿಕ್ಷಕ

7:35 PM, Thursday, July 9th, 2020
Share
1 Star2 Stars3 Stars4 Stars5 Stars
(No Ratings Yet)
Loading...

Tahashildharಕೋಲಾರ : ನಿವೃತ್ತ ಶಿಕ್ಷಕರೊಬ್ಬರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಗೆ ಚಾಕುವಿನಿಂದ ಇರಿದಿದ್ದು, ತಹಶೀಲ್ದಾರ್ ಸಾವನ್ನಪ್ಪಿರುವ ಘಟನೆ  ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಗುರುವಾರ  ನಡೆದಿದೆ.

ಕಳವಂಚಿ ಗ್ರಾಮಕ್ಕೆ ಸರ್ವೇ ನಡೆಸಲು ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ್ ಹೋಗಿದ್ದರು. ಈ ಸಂದರ್ಭ ನಿವೃತ್ತ ಶಿಕ್ಷಕ ವೆಂಕಟಪತಿ ಎಂಬ ವ್ಯಕ್ತಿ ಚೂರಿಯಿಂದ ತಹಶೀಲ್ದಾರ್ ಗೆ ಇರಿದಿದ್ದಾರೆ. ಗಂಭೀರ ರಕ್ತಸ್ರಾವವಾಗಿ ತಹಶೀಲ್ದಾರ್ ಸಾವನ್ನಪ್ಪಿದ್ದಾರೆ.

ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸರ್ವೇಗೆ ಬಂದಿದ್ದ ರಾಮಮೂರ್ತಿ ಹಾಗೂ ಆರೋಪಿ ವೆಂಕಟಪತಿ ಎಂಬುವರ ಜಮೀನು ಒಂದೇ ಕಡೆ ಇದ್ದು, ಜಮೀನಿಗೆ ಸಂಬಂಧಪಟ್ಟಂತೆ ಇಬ್ಬರ ನಡುವೆ ವ್ಯಾಜ್ಯವಿತ್ತು. ರಾಮಮೂರ್ತಿ ಬಂಗಾರಪೇಟೆ ತಹಶೀಲ್ದಾರ್ ಗೆ ಇಬ್ಬರ ಜಮೀನನ್ನು ಹದ್ದುಬಸ್ತು ಮಾಡುವಂತೆ ದೂರು ನೀಡಿದ್ದರು.

ದೂರನ್ನು ಆಧರಿಸಿ ಇಂದು ತಹಶೀಲ್ದಾರ್ ಚಂದ್ರಮೌಳೇಶ್ವರ್, ಕಾಮಸಮುದ್ರ ಪೊಲೀಸ್ ಠಾಣೆಯ ಪೇದೆ ಜೊತೆ ಗ್ರಾಮಕ್ಕೆ ಭೇಟಿ ನೀಡಿದ್ದರು.

ಸರ್ವೇ ನಡೆಸಿದ ತಹಶೀಲ್ದಾರ್, ವೆಂಕಟಪತಿ ಜಮೀನಿನಲ್ಲಿ ಕಲ್ಲು ಊಳಿಸಿದ್ದಾರೆ. ಇದಕ್ಕೆ ಕೋಪಗೊಂಡ ವೆಂಕಟಪತಿ ಏಕಾಏಕಿ ತಹಶೀಲ್ದಾರ್ ಎದೆ ಭಾಗಕ್ಕೆ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ತಹಶೀಲ್ದಾರ್ ಗೆ ತೀವ್ರ ರಕ್ತ ಸ್ರಾವವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಂದ್ರಮೌಳೇಶ್ವರ ಅವರ ಸಾವಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಚಂದ್ರಮೌಳೇಶ್ವರ್ ರಾತ್ರಿ ಹಗಲು ದುಡಿದಿದ್ದಾರೆ. ತಾಲೂಕಿನಲ್ಲಿ ಒಳ್ಳೆ ಹೆಸರು ಮಾಡಿ,ಜನರ ವಿಶ್ವಾಸ ಗೆದ್ದಿದ್ದರು. ಇಂತಹ ಅಮಾಯಕರು ಕೊಲೆ ಆದರೆ ಧೈರ್ಯದಿಂದ ಯಾರು ಸೇವೆ ಮಾಡಲು ಮುಂದೆ ಬರುತ್ತಾರೆ? ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಗೆ ಚಾಕು ಇರಿದು ನಂತರ ಪರಾರಿಯಾಗಿದ್ದ ವೆಂಕಟಪತಿಯನ್ನು ಘಟನೆ ನಡೆದ ಒಂದು ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಾಡಿನಲ್ಲಿ ವೆಂಕಟಪತಿ ಅಡಗಿ ಕುಳಿತಿದ್ದು, ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English