ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಒಂದೇ ದಿನ ಬರೋಬ್ಬರಿ 167 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಗುರುವಾರ ಇಬ್ಬರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಇಂದು ಎರಡನೆಯ ಅತಿಹೆಚ್ಚು ಕೇಸ್‌ಗಳು ಪತ್ತೆಯಾಗಿದೆ. ಜು.8ರಂದು 183 ಪ್ರಕರಣಗಳು ಬಂದಿದ್ದವು. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1709ಕ್ಕೆ ಏರಿಕೆಯಾಗಿದೆ. ಇದರಲ್ಲಿ 10 ಮಂದಿ ಹೊರಜಿಲ್ಲೆಯವರಾಗಿದ್ದಾರೆ.
ಗುರುವಾರ ಸ್ವೀಕೃತವಾದ ವರದಿಯಲ್ಲಿನ ಸೋಂಕಿತರ ಪೈಕಿ 64 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಇನ್ನುಳಿದಂತೆ ಐಎಲ್‌ಐ (ಶೀತ-ಜ್ವರ) 42, ಎಸ್‌ಎಆರ್‌ಐ (ಉಸಿರಾಟ ತೊಂದರೆ) ಆರು ಪ್ರಕರಣ, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನಲ್ಲಿ (ಮೂಲ ನಿಗೂಢ) 51, ಪ್ರೀ ಸರ್ಜರಿ ಪರೀಕ್ಷೆಯಲ್ಲಿ 13, ಕತರ್, ದುಬೈನಿಂದ ಬಂದ ಮೂವರು, ಬೆಂಗಳೂರಿನಿಂದ ಬಂದಿದ್ದ ಓರ್ವನಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರೆಲ್ಲರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಸೋಂಕು ತಗುಲಿದವರಲ್ಲಿ ಮೂಲ ನಿಗೂಢವಾಗಿದ್ದವರ ಸಂಖ್ಯೆಯೇ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಪೈಕಿ ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನಲ್ಲಿ 38, ಪ್ರೀ ಸರ್ಜರಿ ಸ್ಯಾಂಪಲ್‌ನಲ್ಲಿ 13 ಮಂದಿಗೆ ಸೋಂಕು ತಗುಲಿದೆ. ಗುರುವಾರ ಒಂದೇ ದಿನ 51 ನಿಗೂಢ ಪ್ರಕರಣಗಳು ಕಂಡು ಬಂದಿವೆ.
ಸಮಾಧಾನಕರ ಬೆಳವಣಿಗೆಯಲ್ಲಿ ಗುರುವಾರ ಏಳು ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 702 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ. ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ದ.ಕ. ಜಿಲ್ಲೆಯಲ್ಲಿ ಗುರುವಾರ ಕೊರೋನ ಸೋಂಕಿಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಭಟ್ಕಳ ನಿವಾಸಿ 62 ವರ್ಷದ ವೃದ್ಧ ಎಸ್‌ಎಆರ್‌ಐ (ಉಸಿರಾಟ ತೊಂದರೆ) ಪ್ರಕರಣದಡಿ ಜು.7ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮಂಗಳೂರಿನ ನಿವಾಸಿ 49 ವರ್ಷದ ಪುರುಷ ನ್ಯುಮೋನಿಯ, ಯಕೃತ್ ರೋಗದಿಂದ ಬಳಲುತ್ತಿದ್ದು, ಜು.7ರಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರು ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಇವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು.
ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಈ ಪೈಕಿ ಐವರು ಹೊರಜಿಲ್ಲೆಯವರಾಗಿದ್ದಾರೆ. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಏಳು ಮಂದಿಯನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಆರೋಗ್ಯ ಸ್ಥಿತಿ ಗಂಭೀರವಾಗಿ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಗುರುವಾರದಂದು ಮತ್ತೆ 22 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಗುರುವಾರದಂದು 843 ವರದಿಗಳು ನೆಗೆಟಿವ್ ಆಗಿವೆ. ಇನ್ನು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 1443ಕ್ಕೆ ಏರಿಕೆಯಾಗಿದೆ. ಇನ್ನು ಕೂಡ 2433 ಮಂದಿಯ ವರದಿಗಳು ಕೈ ಸೇರಲು ಬಾಕಿ ಇದೆ. ಜಿಲ್ಲೆಯಲ್ಲಿ ಒಟ್ಟು 223 ಮಂದಿ ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Click this button or press Ctrl+G to toggle between Kannada and English