ಬಂಟ್ವಾಳ : ಅಡ್ಯಾರ್ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರ ಮೇಲೆ ದುಷ್ಕರ್ಮಿಗಳ ತಂಡ ಮಾರಣಾತಿಕ ಹಲ್ಲೆ ನಡೆಸಿದ ಘಟನೆ ಅಡ್ಯಾರ್ ಸಮೀಪ ಶುಕ್ರವಾರ ರಾತ್ರಿ ನಡೆದಿದೆ.
ಮೃತಪಟ್ಟವರನ್ನು ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ, ಅಡ್ಯಾರ್ ಪದವು ನಿವಾಸಿ ಯಾಕೂಬ್ ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಅಡ್ಯಾರ್ ಸಮೀಪ ತಂಡವೊಂದು ಯಾಕೂಬ್ ಮೇಲೆ ದಾಳಿ ನಡೆಸಿದೆಯೆನ್ನಲಾಗಿದೆ. ತಂಡದಲ್ಲಿದ್ದವರಲ್ಲಿ ಒಬ್ಬ ವ್ಯಕ್ತಿ ಯಾಕೂಬ್ ಅವರಿಗೆ ಪರಿಚಯಸ್ಥನಾಗಿದ್ದು ಕೆಲವು ವರ್ಷಗಳ ಹಿಂದೆ ಆತ ಅಡ್ಯಾರ್ ಪದವಿನಲ್ಲಿ ವಾಸವಿದ್ದು ಪ್ರಸಕ್ತ ಮಂಗಳೂರಿನಲ್ಲಿ ವಾಸವಿದ್ದಾನೆ ಎನ್ನಲಾಗಿದೆ.
ಯಾಕೂಬ್ ಅವರಿಗೆ ತಂಡ ದಾಳಿ ನಡೆಸಿದ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನ್ನ ಮೇಲೆ ದಾಳಿ ನಡೆದ ಬಳಿಕ ಮನೆಗೆ ಬಂದ ಯಾಕೂಬ್ ಅವರು ಪರಿಚಯಸ್ಥನ ಆಟೋ ರಿಕ್ಷಾದಲ್ಲಿ ಪುತ್ರನೊಂದಿಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಯಾಕೂಬ್ ಅಡ್ಯಾರ್ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ದಾಳಿಗೆ ವೈಯಕ್ತಿಕ ಮತ್ತು ರಾಜಕೀಯ ಹಿನ್ನೆಲೆ ಇರಬಹುದು ಎಂದು ಶಂಕಿಸಲಾಗಿದೆ.
Click this button or press Ctrl+G to toggle between Kannada and English