ಮಂಗಳೂರು: ಶ್ವಾಸಕೋಶದ ತೊಂದರೆಯಿಂದ ಬಳಲಿದ ಯುವ ಜಾದು ಕಲಾವಿದನೊಬ್ಬ ಖಾಸಗಿ ಆಸ್ಪತ್ರೆಯಲ್ಲಿ 1.5 ಲಕ್ಷ ರೂಪಾಯಿ ಚಿಕಿತ್ಸೆಗೆ ಖರ್ಚು ಮಾಡಿ ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಮಾರ್ಗಸೂಚಿಯ ಅನುಸಾರ ಮರಣದ ಬಳಿಕ ಸ್ವಾಬ್ ಟೆಸ್ಟ್ ನಡೆಸಲಾಗಿತ್ತು. ಅದರ ವರದಿ ಬಂದಿದ್ದು ಕೊರೋನಾ ಸೋಂಕು ಇರುವುದು ಖಚಿತವಾಗಿದೆ.
ಮಂಗಳೂರು ನಗರದ ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ ಹೊಸಬೆಟ್ಟು ನಿವಾಸಿ ಯತೀಶ್ ಸಾಲ್ಯಾನ್(35) ಅಕಾಲಿಕವಾಗಿ ಸಾವನ್ನಪ್ಪಿದ್ದವರು.
ನಾಲ್ಕು ದಿನಗಳ ಮೊದಲು ಶ್ವಾಸಕೋಶದ ತೊಂದರೆಯಿಂದ ಬಳಲಿದ ಇವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ 1.5 ಲಕ್ಷ ರೂಪಾಯಿ ಚಿಕಿತ್ಸೆಯ ಬಿಲ್ ಬಂದಿತ್ತು. ಇದರಿಂದ ಕಂಗೆಟ್ಟ ಯತೀಶ್ ಕುಟುಂಬದವರು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಯತೀಶ್ ಮೃತಪಟ್ಟಿದ್ದಾರೆ.
ಕುದ್ರೋಳಿ ಗಣೇಶ್ ತಂಡದಲ್ಲಿ ಯತೀಶ್ ಜಾದೂ ಕಲಾವಿದರಾಗಿದ್ದರು. ಆನಂತರ ವಿದೇಶಕ್ಕೆ ತೆರಳಿ ಉದ್ಯೋಗದ ಜತೆ ಕ್ಲೋಸ್ ಅಪ್ ಜಾದೂ ಕಾರ್ಯಕ್ರಮ ನಡೆಸುತ್ತಿದ್ದರು.
ಇತ್ತೀಚೆಗೆ ಸ್ವದೇಶಕ್ಕೆ ಮರಳಿದ ಇವರು ಇಲ್ಲಿ ಉದ್ಯೋಗವನ್ನು ಮಾಡುತ್ತಿದ್ದು ಅದರ ಜತೆಗೆ ಜಾದೂವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಮೃತರು ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ.
Click this button or press Ctrl+G to toggle between Kannada and English