ರಾಯಚೂರು : ಮಗಳನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಎಂಬ ಕಾರಣಕ್ಕೆ ಯುವಕನ ಮನೆಯವರನ್ನೇ ಅಮಾನುಷವಾಗಿ ಕೊಲೆಗೈದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದಿದೆ .
ಯುವಕನು ತನ್ನ ಹೆಂಡತಿಯೊಂದಿಗೆ ರಕ್ಷಣೆ ಕೋರಿ ಪೊಲೀಸ್ ಠಾಣೆಯಲ್ಲಿದ್ದ ಸಂದರ್ಭ ಯುವಕನ ಮನೆ ಬಳಿಗೆ ಬಂದ ಹೆಂಡತಿ ಮನೆಯವರು ಆತನ ತಂದೆ-ತಾಯಿ, ಅತ್ತಿಗೆ, ಇಬ್ಬರು ಅಣ್ಣಂದಿರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಯುವಕನ ಕುಟುಂಬದ ಐವರನ್ನು ಅವರ ಮನೆ ಮುಂದೆಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ . ಹುಡುಗನ ತಂದೆ ಈರಪ್ಪ (60), ತಾಯಿ ಸುಮಿತ್ರಮ್ಮ (55), ಸಹೋದರರಾದ ಹನುಮೇಶ (32) ಹಾಗೂ ನಾಗರಾಜ (35) ಮತ್ತು ಅತ್ತಿಗೆ ಶ್ರೀದೇವಿ (30) ಕೊಲೆಗೀಡಾದವರು.
ಹುಡುಗಿಯ ತಂದೆ ಸಣ್ಣ ಫಕೀರಪ್ಪ ಮತ್ತು ಈತನ ಸಹೋದರರಾದ ದೊಡ್ಡ ಫಕೀರಪ್ಪ ಮತ್ತು ಅಂಬಣ್ಣ ಎಂಬುವರು ಕೊಲೆ ಮಾಡಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತೀವ್ರ ಗಾಯಗೊಂಡ ತಾಯಮ್ಮ ಮತ್ತು ರೇವತಿ ಎಂಬುವರನ್ನು ಬಳ್ಳಾರಿ ಆಸ್ಪತ್ರೆಗೆ ಕಳಿಸಲಾಗಿದೆ.
ಸಿಂಧನೂರಿನ ಒಂದೇ ಕೋಮಿನ ಯುವಕ ಮೌನೇಶ ಮತ್ತು ಯುವತಿ ಮಂಜುಳಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಯುವತಿ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಇವರಿಬ್ಬರು ಮನೆ ಬಿಟ್ಟು ಹೋಗಿ ಕಳೆದ ವರ್ಷ ಮದುವೆ ಆಗಿದ್ದರು. ಬಳಿಕ ಅತ್ತಿಗೆ ಶ್ರೀದೇವಿ ಮನೆಯಲ್ಲಿ ಆಶ್ರಯ ಪಡೆದಿದ್ದರು. ಜೀವಭಯದಿಂದ ಜೂನ್ 11 ರಂದು ಪೊಲೀಸ್ ಠಾಣೆಗೆ ಬಂದ ಜೋಡಿ ರಕ್ಷಣೆ ಕೋರಿತ್ತು.
ಶನಿವಾರ ಬೆಳಗ್ಗೆ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ಆಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಯುವಕನ ಮನೆಯವರ ಮೇಲೆ ಯುವತಿ ಕುಟುಂಬಸ್ಥರು ದೊಣ್ಣೆ ಮತ್ತು ರಾಡುಗಳಿಂದ ಮನಸೋಇಚ್ಛೆ ಹೊಡೆದು ಸ್ಥಳದಲ್ಲೇ ನಾಲ್ವರನ್ನು ಕೊಲೆ ಮಾಡಿದ್ದಾರೆ.
ಯುವಕನ ತಂದೆ ಈರಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ನಾಲ್ವರ ಶವಗಳು ಮನೆ ಮುಂದೆ ಚೆಲ್ಲಾಪಿಲ್ಲಿಯಾಗಿ ಬಿದಿದ್ದನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
Click this button or press Ctrl+G to toggle between Kannada and English