ಮಂಗಳೂರು : ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಒಳಗೊಂಡಿರಬೇಕು ಮತ್ತು ಅವುಗಳು ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ನಿತ್ಯ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿನ ಆಭರಣಗಳನ್ನು ಸಂರಕ್ಷಣೆ ಹಾಗೂ ಮೌಲ್ಯಮಾಪನ ಮಾಡುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿದರು.
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಅನಾದಿ ಕಾಲದ ವಿಗ್ರಹ, ಚಿನಬೆಳ್ಳಿ ಮತ್ತು ಇನ್ನಿತರ ಅಮೂಲ್ಯ ವಸ್ತುಗಳ ಕಳ್ಳಸಾಗಣಿಕೆಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ದೇವಾಲಯಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ಅವುಗಳು ರೆಕಾರ್ಡಿಂಗ್ ಕಾರ್ಯನಿರ್ವಹಿಸುತ್ತಿದೆಯೇ ಎಂಬುವುದನ್ನು ಆಡಳಿತ ವರ್ಗ ಪರೀಕ್ಷಿಸಬೇಕು ಎಂದು ಹೇಳಿದರು. ಜೊತೆಗೆ ಬಾಕಿ ಉಳಿದಿರುವ ಎಲ್ಲಾ ದೇವಾಲಯಗಳ ಮೌಲ್ಯಮಾಪನ ಪ್ರಕ್ರಿಯೆ ಬೇಗ ಮುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೊರೊನಾ ವ್ಯಾಪಕವಾಗುತ್ತಿರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚು ಜನಸಂದಣಿಯನ್ನು ನಿರ್ಬಂಧಿಸಲಾಗಿದೆ. ಆದುದರಿಂದ ಮುಂಬರುವ ದಿನಗಳಲ್ಲಿ ನಾಗರಪಂಚಮಿ, ಚೌತಿ ಸೇರಿದಂತೆ ಇನ್ನಿತರ ಹಬ್ಬಗಳನ್ನು ಮನೆಯಲ್ಲಿ ಆಚರಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ ಮಾತನಾಡಿ, ಮುಖ್ಯವಾಗಿ ಎ ಮತ್ತು ಬಿ ವರ್ಗಕ್ಕೆ ಸೇರಿದ ದೇವಾಲಯಗಳಲ್ಲಿ ಪೊಲೀಸ್ ಇಲಾಖೆಯಿಂದ ತರಬೇತಿ ಪಡೆದ ನುರಿತ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಭದ್ರತೆಯ ದೃಷ್ಠಿಯಿಂದ ಎಲ್ಲಾ ದೇವಾಲಯಗಳ ಆಡಳಿತ ವರ್ಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ದೇವಸ್ಥಾನಗಳಲ್ಲಿ ಒಂದೇ ಬಾಗಿಲಲ್ಲಿ ಪ್ರವೇಶಕ್ಕೆ ಅನುಮತಿ ನೀಡಬೇಕು. ಅಲಾರ್ಮ್(ಗಂಟೆ) ಅಳವಡಿಸಿ ಅವುಗಳ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಬೇಕು. ಈ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.
ದೇವಾಲಯಗಳಲ್ಲಿ ಕನಿಷ್ಠ ಪ್ರತೀ ವರ್ಷಕ್ಕೊಮ್ಮೆ ಹುಂಡಿ ಖಾಲಿ ಮಾಡುತ್ತಾ ಇರಬೇಕು. ಸ್ಥಳೀಯ ಪೊಲೀಸ್ ಇಲಾಖೆಯ ಸಹಾಯ ಪಡೆದು ಸಿಸಿಟಿವಿಯನ್ನು ಪರಿಶೀಲಿಸಬೇಕು. ಭದ್ರತಾ ಸಿಬ್ಬಂದಿಗಳಿಗೆ ಪೊಲೀಸ್ ಇಲಾಖೆಯ ಮುಖಾಂತರ ತರಬೇತಿ ನೀಡಬೇಕು. ದೇವಾಲಯದ ಆಭರಣಗಳನ್ನು ಸಂರಕ್ಷಿಸಿಡಲು ಸೂಕ್ತ ಖಜಾನೆ ವ್ಯವಸ್ಥೆ ಇರಬೇಕು. ಜೊತೆಗೆ ಅಲಾರ್ಮ್ (ಗಂಟೆ)ಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಕನೆಕ್ಟ್ ಆಗಿ ಇರಬೇಕು. ದೇವಾಲಯಗಳಲ್ಲಿ ಒಂದೇ ಬಾಗಿಲು ವ್ಯವಸ್ಥೆ ಒಳಗೊಂಡಿರಬೇಕು. ಹೆಚ್ಚು ಭಾರವಿರುವ ಹುಂಡಿಯನ್ನು ಇಡಬೇಕು. ಎಲ್ಲಾ ದೇವಾಲಯಗಳ ಗೋಪುರ ಸೇರಿದಂತೆ ಎಲ್ಲಾ ಕಡೆ ಬೆಳಕು ಇರಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ದೇವಾಲಯದ ಆಡಳಿತಾಧಿಕಾರಿಗಳಿಗೆ ಡಿಸಿಪಿ ಅರುಣಾಂಶಗಿರಿ ಸೂಚಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ದೇವಾಲಯಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ಧರು.
Click this button or press Ctrl+G to toggle between Kannada and English