ಮಂಗಳೂರು : ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ ಜೊತೆಗೆ ಉಡುಪಿ ಜಿಲ್ಲೆಯು ಶೇ.90.71 ಫಲಿತಾಂಶದೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿವೆ.
ಪಿಯುಸಿ ಫಲಿತಾಂಶದ ಮೊದಲೆರಡು ಸ್ಥಾನಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಸ್ಪರ್ಧೆಯಲ್ಲಿತ್ತು. 2013ರಲ್ಲಿ ಉಡುಪಿ ಜಿಲ್ಲೆ ಶೇ.86.24 ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, 2014 ರಿಂದ 2016ರವರೆಗೆ ಸತತ ಮೂರು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ ವನ್ನು ತನ್ನ ಬಳಿ ಉಳಿಸಿಕೊಂಡಿತ್ತು.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 2019 ಉಡುಪಿ ಜಿಲ್ಲೆ ರಾಜ್ಯಕ್ಕೆ ಮೊದಲಿಗನಾಗಿತ್ತು, ಇಂದು ಪ್ರಕಟಗೊಂಡ 2020ನೇ ಸಾಲಿನ ಫಲಿತಾಂಶದಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿಯಾದ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿದೆ. ಶೇ.90.71 ಉತ್ತೀರ್ಣತೆಯ ಫಲಿತಾಂಶದೊಂದಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಜಂಟಿಯಾಗಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿವೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ 2013ರಿಂದ ಸೆಣಸಾಟ ನಡೆಯುತ್ತಿದ್ದು, ಈ ಬಾರಿ ಎರಡೂ ಜಿಲ್ಲೆಗಳು ಸಮಾನ ಸಾಧನೆ ಮಾಡಿವೆ.
2017ರಲ್ಲಿ ಶೇ.90.01 ಫಲಿತಾಂಶದೊಂದಿಗೆ ರಾಜ್ಯದ ಅಗ್ರಸ್ಥಾನವನ್ನು ಮರಳಿ ಪಡೆದ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ (89.92)ವನ್ನು ಎರಡನೇ ಸ್ಥಾನಕ್ಕೆ ತಳ್ಳಿತ್ತು. ಇದಕ್ಕೆ ಎದಿರೇಟು ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆ, 2018ರಲ್ಲಿ ಶೇ.91.49 ಉತ್ತೀರ್ಣತೆ ಯೊಂದಿಗೆ ಉಡುಪಿಯನ್ನು ಮತ್ತೆ (ಶೇ.90.67) ಎರಡನೇ ಸ್ಥಾನಕ್ಕೆ ತಳ್ಳಿತ್ತು. ಆದರೆ ಕಳೆದ ವರ್ಷ (2019) ಉಡುಪಿ ಜಿಲ್ಲೆ ಶೇ.92.20ರ ಸಾಧನೆಯೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತ್ತು. ಈ ಬಾರಿ ಉಡುಪಿ ಜಿಲ್ಲೆಯ 27 ಕೇಂದ್ರಗಳಲ್ಲಿ ಮೊದಲ ಬಾರಿ ಪರೀಕ್ಷೆ ಬರೆದ ಒಟ್ಟು 13775 ವಿದ್ಯಾರ್ಥಿಗಳಲ್ಲಿ 12495 ಮಂದಿ ಉತ್ತೀರ್ಣರಾಗಿ ಶೇ.90.71 ಫಲಿತಾಂಶ ಬಂದಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 15073 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 12961 ಮಂದಿ ತೇರ್ಗಡೆಗೊಂಡು ಶೇ.85.99 ಫಲಿತಾಂಶ ಬಂದಿದೆ.
ಪರೀಕ್ಷೆ ಬರೆದ 7353 ವಿದ್ಯಾರ್ಥಿಗಳಲ್ಲಿ 5988 ಮಂದಿ (ಶೇ.81.44) ತೇರ್ಗಡೆಗೊಂಡರೆ, 7720 ವಿದ್ಯಾರ್ಥಿನಿಯರಲ್ಲಿ 6973 (ಶೇ.90.32) ಮಂದಿ ತೇರ್ಗಡೆಗೊಂಡಿದ್ದಾರೆ. ನಗರ ಪ್ರದೇಶದ ಶೇ.90.42ರಷ್ಟು ಹಾಗೂ ಗ್ರಾಮೀಣ ಭಾಗದ ಶೇ.90.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇನ್ನು ವಿಜ್ಞಾನ ವಿಭಾಗದಲ್ಲಿ ಶೇ.95.8ರಷ್ಟು ಮಂದಿ, ಕಾಮರ್ಸ್ ವಿಭಾಗದಲ್ಲಿ ಶೇ.91.56ರಷ್ಟು ಮಂದಿ ಹಾಗೂ ಕಲಾ ವಿಭಾಗದಲ್ಲಿ ಶೇ.68.87ರಷ್ಟು ಮಂದಿ ಈ ಬಾರಿ ಉತ್ತೀರ್ಣಗೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಬರೆದು ಶೇ.66.23ರಷ್ಟು ಮಂದಿ ಪಾಸಾದರೆ, ಇಂಗ್ಲೀಷ್ ಮಾಧ್ಯಮದಲ್ಲಿ ಬರೆದ ಶೇ.91.17ರಷ್ಟು ಮಂದಿ ತೇರ್ಗಡೆಹೊಂದಿದ್ದಾರೆ.
ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಅಭಿಜ್ಞಾ ರಾವ್ ಅವರು 596 ಅಂಕಗಳನ್ನು ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯದ ಅಗ್ರಸ್ಥಾನವನ್ನು ಬೆಂಗಳೂರಿನ ವಿದ್ಯಾರ್ಥಿಯೊಂದಿಗೆ ಹಂಚಿಕೊಂಡಿದ್ದಾರೆ. ಇದೇ ಕಾಲೇಜಿನ ಗ್ರೀಷ್ಮಾ ರಾವ್ ಹಾಗೂ ಎಂಜಿಎಂ ಪದವಿ ಪೂರ್ವ ಕಾಲೇಜಿನ ಮೇಧಾ ಎನ್.ಭಟ್ ಅವರು ತಲಾ 593 ಅಂಕಗಳಿಸಿದ್ದು ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈವರೆಗೆ ಸಿಕ್ಕಿರುವ ಮಾಹಿತಿಗಳಂತೆ ಕಾಮರ್ಸ್ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಬಿ.ರಿತಿಕಾ ಕಾಮತ್ ಹಾಗೂ ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಸ್ವಾತಿ ಪೈ ತಲಾ 594 ಅಂಕಗಳೊಂದಿಗೆ ಜಿಲ್ಲೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರು ರಾಜ್ಯದಲ್ಲಿ ಉಳಿದವರೊಂದಿಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಎಂಜಿಎಂ ಕಾಲೇಜಿನ ಕೆ.ಅನಂತಕೃಷ್ಣ ನಾಯಕ್ 586, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸುಮೇಧ 584 ಅಂಕಗಳನ್ನು ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಎಂಜಿಎಂ ಪದವಿ ಪೂರ್ವ ಕಾಲೇಜಿನ ಸಮನ್ವಿ ಅವರು 573 (ಶೇ.95.5) ಅಂಕಗಳನ್ನು ಗಳಿಸಿದ್ದು, ಉಳಿದಂತೆ ನಾಳೆ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಹೆಚ್ಚಿನ ಮಾಹಿತಿ ದೊರೆಯುವ ನಿರೀಕ್ಷೆ ಇದೆ.
8ಕಾಲೇಜುಗಳಿಗೆ ಶೇ.100: ಜಿಲ್ಲೆಯಲ್ಲಿ ಇದುವರೆಗೆ ಸಿಕ್ಕಿರುವ ಮಾಹಿತಿಯಂತೆ ಮೂರು ಸರಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು ಎಂಟು ಕಾಲೇಜುಗಳು ಶೇ.100 ಫಲಿತಾಂಶವನ್ನು ಪಡೆದಿವೆ. ಇವುಗಳೆಂದರೆ ಸರಕಾರಿ ಪದವಿ ಪೂರ್ವ ಕಾಲೇಜು ಶಿರ್ಲಾಲು ಕಾರ್ಕಳ, ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಆರೂರು ಬ್ರಹ್ಮಾವರ ಹಾಗೂ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಮಿಯಾರು ಕಾರ್ಕಳ.
ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಾದ ವಿದ್ಯೋದಯ ಪದವಿ ಪೂರ್ವ ಕಾಲೇಜು ಉಡುಪಿ, ಬ್ರಹ್ಮಾವರದ ನಿರ್ಮಲಾ ಪದವಿ ಪೂರ್ವ ಕಾಲೇಜು, ಉಡುಪಿಯ ಮಹೇಶ್ ಪದವಿ ಪೂರ್ವ ಕಾಲೇಜು, ಕ್ರೈಸ್ಟ್ಕಿಂಗ್ ಪದವಿ ಪೂರ್ವ ಕಾಲೇಜು ಕಾರ್ಕಳ ಹಾಗೂ ಮೂಳೂರು ಅನ್ಇಹ್ಸಾನ್ ಪದವಿ ಪೂರ್ವ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ಪಡೆದಿವೆ ಎಂದು ಜಿಲ್ಲಾ ಪದವಿ ಪೂರ್ವ ಇಲಾಖೆಯ ಮೂಲಗಳು ತಿಳಿಸಿವೆ. ಆಯಾ ಕಾಲೇಜುಗಳಲ್ಲಿ ನಾಳೆ ಬೆಳಗ್ಗೆ ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲಿದೆ.
Click this button or press Ctrl+G to toggle between Kannada and English