ಕೊಲ್ಲೂರಿನಲ್ಲಿ ಬೃಹತ್ ಶಿಲಾಯುಗದ ನಿವೇಶನ ಪತ್ತೆ

9:03 PM, Sunday, July 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

menhirಉಡುಪಿ  : ಭಾರತದ ಪ್ರಖ್ಯಾತ ಶಾಕ್ತ ಆರಾಧನಾ ಕೇಂದ್ರವಾದ ಕೊಲ್ಲೂರಿನ ಮೂಕಾಂಬಿಕೆಯ ದೇವಾಲಯಕ್ಕೆ ಸಮೀಪದಲ್ಲಿರುವ ಮೂಕಾಸುರನ ಬೆಟ್ಟದ ಬುಡದಲ್ಲಿ, ಬೃಹತ್ ಶಿಲಾಯುಗ ಕಾಲದ ನಿಲ್ಸ್‌ಕಲ್ ಸ್ಮಾರಕಶಿಲೆ, ಕಲ್ಗುಳಿ, ಮುರಕಲ್ಲಿನಲ್ಲಿ ಕೊರೆದು ಮಾಡಿರುವ ಬಾವಿ ಮತ್ತು ಮಡಕೆಯ ಅವಶೇಷಗಳು ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷನೆಯಲ್ಲಿ ಪತ್ತೆಯಾಗಿವೆ, ಎಂದು ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿಯವರು ತಿಳಿಸಿರುತ್ತಾರೆ.

ಕೊಲ್ಲೂರಿನ ಬೃಹತ್ ಶಿಲಾಯುಗ ನಿವೇಶನದ ಶೋಧ, ಕೊಲ್ಲೂರು ಮತ್ತು ಕೊಲ್ಲೂರಿನ ಮೂಕಾಂಬಿಕೆಯ ಪ್ರಾಚೀನತೆಯನ್ನು ಸುಮಾರು ಕ್ರಿ.ಪೂ. 1000 ವರ್ಷಗಳಷ್ಟು ಪ್ರಾಚೀನ ಪರಂಪರೆ ಎಂಬುದನ್ನು ಧೃಡೀಕರಿಸಲಿದೆ. ದೇವಿ ಪುರಾಣದ ಪ್ರಕಾರ ಮೂಕಾಸುರನನ್ನು ದೇವಿ ಹತ್ಯೆ ಮಾಡಿದ್ದರಿಂದ, ಮೂಕಾಂಬಿಕೆ ಎಂಬ ಅಭಿದಾನವನ್ನು ಪಡೆದುಕೊಂಡು ಕೊಲ್ಲೂರಿನಲ್ಲಿ ನೆಲೆಸಿದ್ದಾಳೆ. ಬಹುಶಃ, ಮೂಕಾಸುರನ ಸಮಾಧಿಯ ಸಮೀಪ, ಆತನ ಸ್ಮಾರಕವಾಗಿ ಈ ಶಿಲೆಯನ್ನು ನಿಲ್ಲಿಸಿರಬಹುದು.

ಕೊಲ್ಲೂರಿಗೆ ಸಮೀಪದಲ್ಲಿರುವ ಹೊಸನಗರ ತಾಲೂಕಿನ ಬೈಸೆ, ನಿಲ್ಸ್‌ಕಲ್ ಮತ್ತು ಹೆರಗಲ್‌ನಲ್ಲಿ ಸುಮಾರು 40 ನಿಲ್ಸ್‌ಕಲ್ ಮಾದರಿ ಸ್ಮಾರಕಶಿಲೆಗಳು ವಿಶೇಷವಾಗಿ ಕಂಡುಬಂದಿರುವುದನ್ನು ವಿದ್ವಾಂಸರು ಈಗಾಗಲೇ ವರದಿ ಮಾಡಿದ್ದಾರೆ. ನಾನು ಉಡುಪಿ ಜಿಲ್ಲೆಯ ಸುಭಾಸ್‌ನಗರದ ಬಗ್ಗಡಿಕಲ್ ಸಮೀಪ ನಾಲ್ಕು, ನಿಟ್ಟೂರಿನ ಅಡ್ಕದಕಟ್ಟೆಯಲ್ಲಿ ಒಂದು ಹಾಗೂ ಬುದ್ಧನಜೆಡ್ಡುವಿನಲ್ಲಿ ಒಂದು, ಕೊಡಗಿನ ಅರಸಿಣಗುಪ್ಪೆಯಲ್ಲಿ ಒಂದು ಹಾಗೂ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮೂರು ನಿಲ್ಸ್‌ಕಲ್ ಮಾದರಿ ಸ್ಮಾರಕಶಿಲೆಗಳನ್ನು ಸಂಶೋಧಿಸಿ ವರದಿ ಮಾಡಿದ್ದೇನೆ. ಉಡುಪಿ ಜಿಲ್ಲೆಯಲ್ಲಿ ಇದು ಏಳನೆಯ ಶೋಧವಾಗಿದೆ.

mukambiakaನಿಲ್ಸ್‌ಕಲ್ ಎಂದರೆ ಏನು?
ಬೃಹತ್ ಶಿಲಾಯುಗ ಕಾಲದ ಸಮಾಧಿಗಳ ಸಮೀಪದಲ್ಲಿ, ಮೃತ ವ್ಯಕ್ತಿಗಳ ನೆನಪಿಗಾಗಿ ನೆಟ್ಟಿರುವ ಸ್ಮಾರಕಶಿಲೆಗಳಿವು. ಉಡುಪಿ ಜಿಲ್ಲೆಯ ಸುಭಾಷ್‌ನಗರದಿಂದ ಕುರ್ಕಾಲ್‌ಗೆ ಹೋಗುವ ರಸ್ತೆಯಲ್ಲಿ ಬಗ್ಗಡಿಕಲ್ ಎಂಬ ಸ್ಥಳದಲ್ಲಿ ಬೃಹತ್‌ಶಿಲಾಯುಗದ ಗುಹಾ ಸಮಾಧಿಗಳಿದ್ದು ಅವುಗಳ ಸಮೀಪದಲ್ಲಿ ಮತ್ತು ನಿಟ್ಟೂರಿನ ಗುಹಾ ಸಮಾಧಿಗಳ ಸಮೀಪ ಅಡ್ಕದಕಟ್ಟೆಯಲ್ಲಿ ನಿಲ್ಸ್‌ಕಲ್‌ಗಳನ್ನು ನಿಲ್ಲಿಸಲಾಗಿದೆ. ಸುಮಾರು1.5 ಮೀ ನಿಂದ 3ಮೀ ಎತ್ತರದ ವರೆಗಿನ ಕಲ್ಲುಗಳನ್ನು ಬಹುತೇಕ ಪೂರ್ವದ ದಿಕ್ಕಿಗೆ ಸ್ವಲ್ಪ ವಾಲಿದಂತೆ ನಿಲ್ಲಿಸಲಾಗಿರುತ್ತದೆ. ನಿಲ್ಸ್‌ಕಲ್ ಹೆಸರೇ ಸೂಚಿಸುವಂತೆ ಇವು ನಿಲ್ಲಿಸಿದ ಕಲ್ಲು ಅಥವಾ ಕಲ್ಲುಗಳು.

ಕೊಲ್ಲೂರಿನಲ್ಲಿ ಪತ್ತೆಯಾಗಿರುವ ನಿಲ್ಸ್‌ಕಲ್ ಮಾನವ ಚಟುವಟಿಕೆಯಿಂದಾಗಿ ನೆಲದ ಮೇಲೆ ಬಿದ್ದಿದೆ. ಇದು ಸುಮಾರು 2.10 ಮೀ ಎತ್ತರವಾಗಿದ್ದು, ಬುಡದಲ್ಲಿ 0.65 ಮೀ, ತುದಿಯಲ್ಲಿ 0.55 ಮೀ ಅಗಲವಾಗಿದೆ, ಸ್ಥಳೀಯವಾಗಿ ದೊರೆಯುವ ಗ್ರಾನೈಟ್ ಶಿಲೆಯನ್ನೇ ಈ ನಿಲ್ಸ್‌ಕಲ್‌ಗಾಗಿ ಬಳಸಲಾಗಿದೆ. ಬೃಹತ್ ಶಿಲಾಯುಗದ ಜನ ದಕ್ಷಿಣ ಭಾರತದಾದ್ಯಂತ ಗ್ರಾನೈಟ್ ಶಿಲೆಯನ್ನೇ ಸಮಾಧಿಗಳ ರಚನೆಗಾಗಿ ಬಳಸಿಕೊಂಡಿರುವುದು ಆ ಸಂಸ್ಕೃತಿಯ ಒಂದು ವೈಶಿಷ್ಟ್ಯವಾಗಿದೆ.

ಈ ಸಂಶೋಧನೆಯಲ್ಲಿ ನನಗೆ ನೆರವಾದ ಕೊಲ್ಲೂರಿನ ಮುರುಳೀಧರ ಹೆಗ್ಡೆ, ರಮೇಶ್ ಅನಗಳ್ಳಿ, ಗದ್ದೇಮನೆ ಚಂದ್ರ ಯು.ಬಿ. ರಾಘವೇಂದ್ರ ಐತಾಳ್, ಜನಾರ್ಧನ ಆಚಾರಿ ಮತ್ತು ನುಕ್ಸಾಲ್ ಭಾಸ್ಕರ್ ರವರಿಗೆ ನಾನು ಅಭಾರಿಯಾಗಿದ್ದೇನೆ.

cupule

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English