ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 89 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,685ಕ್ಕೆ ಏರಿಕೆಯಾಗಿದೆ.
ದ.ಕ. ಜಿಲ್ಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿ, ಶೀತ-45, ತೀವ್ರ ಉಸಿರಾಟ ತೊಂದರೆ-16, ವಿದೇಶದಿಂದ ಆಗಮಿಸಿದ ಇಬ್ಬರು, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 57 ಮಂದಿ ಸೋಮವಾರ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇಲ್ಲಿಯವರೆಗೆ 1,548 ಮಂದಿ ಗುಣಮುಖರಾಗಿದ್ದಾರೆ. ಆಸ್ಪತ್ರೆಗಳಲ್ಲಿ 2,055 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ.
ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಎರಡು ತಿಂಗಳ ಮಗು ಸಹಿತ ಐವರು ಕೋವಿಡ್‌ಗೆ ಬಲಿಯಾಗಿದ್ದಾರೆ
ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಇದರಲ್ಲಿ 13 ಮಂದಿ ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಬಂದವರು.
ಕೊರೋನ ಸೋಂಕಿನಿಂದಾಗಿ ಮಂಗಳೂರಿನ ಇಬ್ಬರು, ಬೆಳ್ತಂಗಡಿ, ಬಂಟ್ವಾಳ ಹಾಗೂ ಚಿಕ್ಕಮಗಳೂರಿನ ತಲಾ ಒಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ಮೃತರು ಮಧುಮೇಹ, ಉಸಿರಾಟ ತೊಂದರೆ, ವಿವಿಧ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದವರು.
ಬಂಟ್ವಾಳ ತಾಲೂಕಿನ ಎರಡು ತಿಂಗಳಿನ ಗಂಡುಮಗುವನ್ನು ಖಾಸಗಿ ಆಸ್ಪತ್ರೆಗೆ ಜು.17ರಂದು ದಾಖಲು ಮಾಡಲಾಗಿತ್ತು. ತೀವ್ರ ಜ್ವರ, ವಾಂತಿ ಮತ್ತು ಉಸಿರಾಟದ ತೊಂದರೆ, ವಿವಿಧ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.
ಮಂಗಳೂರಿನ ನಿವಾಸಿ 55 ವರ್ಷದ ಪುರುಷನು ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಮೂತ್ರಪಿಂಡ ಕಾಯಿಲೆ, 63 ವರ್ಷದ ವೃದ್ಧನು ಮೂತ್ರಪಿಂಡ, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಮತ್ತು ತೀವ್ರ ಉಸಿರಾಟ ತೊಂದರೆ, ಬೆಳ್ತಂಗಡಿಯ 42 ವರ್ಷದ ವ್ಯಕ್ತಿಯು ವಿವಿಧ ಅಂಗಾಂಗ ವೈಫಲ್ಯ, ಚಿಕ್ಕಮಗಳೂರಿನ 65 ವರ್ಷದ ವೃದ್ಧನು ಶ್ವಾಸಕೋಶ ಕ್ಯಾನ್ಸರ್, ಹೃದಯಸ್ತಂಭನ, ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿದ್ದರು. ಸೋಂಕಿತರೆಲ್ಲರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮತ್ತೆ 99 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1221ಕ್ಕೆ ಏರಿಕೆಯಾಗಿದೆ.
ಸೋಮವಾರ 22 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಇಲ್ಲಿಯ ತನಕ 560 ಮಂದಿಯ ಗುಣಮುಖರಾಗಿ ಬಿಡುಗಡೆಗೊಂಡಂತಾಗಿದೆ. ಇಂದು 251 ಮಂದಿಯ ವರದಿ ನೆಗೆಟಿವ್ ಆಗಿದೆ. ಜಿಲ್ಲೆಯಲ್ಲಿ 661 ಮಂದಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 28 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಈ ಪೈಕಿ 11 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. ಎಂಟು ಮಂದಿ ವಿದೇಶ ಹಾಗೂ 9 ಮಂದಿ ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ.
Click this button or press Ctrl+G to toggle between Kannada and English