ಮೂಲ್ಕಿ: ಯಂತ್ರವನ್ನು ಮುಟ್ಟದೆ ಸ್ಯಾನಿಟೈಸರ್ ನಳ್ಳಿ ಬಳಿ ಕೈ ಇಟ್ಟರೆ ಸಾಕು ಒಂದಷ್ಟು ಸ್ಯಾನಿಟೈಸರ್ ನೇರವಾಗಿ ಕೈಗೆ ಬೀಳುವಂತಹ ಸ್ವಯಂಚಾಲಿತ ಮಿನಿ ಯಂತ್ರವನ್ನು ಹಳೆಯಂಗಡಿ ಬಳಿಯ ಶಾಲಾ ಶಿಕ್ಷಕಿಯೊಬ್ಬರು ರೂಪಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಡುಪಣಂಬೂರು ಗ್ರಾಮ ಪಂಚಾಯಿತಿಯ ತೋಕೂರು ತಪೋವನದ ನಿಟ್ಟೆ ವಿದ್ಯಾ ಸಂಸ್ಥೆಯ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿರುವ, ಸುರತ್ಕಲ್ ನಿವಾಸಿ ಜ್ಯೋತಿ ಕಿರಣ್ ಬಂಜನ್ ಎಸ್. ಈ ಯಂತ್ರವನ್ನು ಶೋಧಿಸಿದವರು. ಅದಕ್ಕೆ ಅವರು ಮಾಡಿರುವ ವೆಚ್ಚ ₹300 ಮಾತ್ರ!
‘ಸಾರ್ವಜನಿಕವಾಗಿ ಇಟ್ಟಿರುವ ಸ್ಯಾನಿಟೈಸರ್ ಯಂತ್ರವನ್ನು ಕಾಲು ಅಥವಾ ಕೈನಿಂದ ಬಳಸಬೇಕು. ಅವುಗಳನ್ನು ಕೊರೊನಾ ಶಂಕಿತ ವ್ಯಕ್ತಿಗಳು ಕೂಡ ಬಳಸುತ್ತಾರೆ. ಇದರಿಂದಾಗಿ ಯಾವುದೇ ರೋಗ ಲಕ್ಷಣ ಇಲ್ಲದ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಸಮಸ್ಯೆ ದೂರ ಮಾಡಲು ಅತಿ ಸುಲಭದಲ್ಲಿ, ಕಡಿಮೆ ಖರ್ಚಿನಲ್ಲಿ ಕೈಯಲ್ಲಿ ಮುಟ್ಟದೇ ಬಳಸುವಂತಹ ಈ ಸ್ವಯಂಚಾಲಿತ ಮಿನಿ ಸ್ಯಾನಿಟೈಸರ್ ಯಂತ್ರ ನೆರವಾಗಲಿದೆ’ ಎನ್ನುತ್ತಾರೆ ಶಿಕ್ಷಕಿ ಜ್ಯೋತಿ ಕಿರಣ್.
‘ಎಂಸಿಎ ಪದವೀಧರೆಯಾಗಿರುವ ಜ್ಯೋತಿ ಅವರು ಪ್ರತಿಭಾನ್ವಿತೆ. ಅವರ ಈ ಹೊಸ ಶೋಧನೆ ಎಲ್ಲರ ಉಪಯೋಗಕ್ಕೂ ಬರುತ್ತದೆ. ಜನರ ಆರೋಗ್ಯ ಸುರಕ್ಷತೆಗೆ ಒತ್ತು ನೀಡುತ್ತದೆ. ಅವರಿಂದ ಇನ್ನಷ್ಟು ಜನೋಪಯೋಗಿ ಶೋಧನೆಗಳು ಬೆಳಕಿಗೆ ಬರಲಿ’ ಎಂದು ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶ್ರೀಲತಾ ರಾವ್ ಶುಭ ಹಾರೈಸಿದ್ದಾರೆ.
Click this button or press Ctrl+G to toggle between Kannada and English