ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 162 ಹೊಸ ಕೊರೋನ ಪ್ರಕರಣಗಳು ಪತ್ತೆಯಾಗಿದ್ದು ಜಿಲ್ಲೆಯ ಒಟ್ಟು ಕೊರೋನ ಸೋಂಕು ಪೀಡಿತರ ಸಂಖ್ಯೆ 3,996ಕ್ಕೆ ಏರಿದೆ. ಕೋವಿಡ್‌ಗೆ ಮತ್ತೆ ಐವರು ಬಲಿಯಾಗಿದ್ದು, ಸಾವಿನ ಸಂಖ್ಯೆ 92ಕ್ಕೆ ಏರಿದೆ.
ಜಿಲ್ಲೆಯಲ್ಲಿ ಬುಧವಾರ ಪತ್ತೆಯಾದ ಪ್ರಕರಣಗಳಲ್ಲಿ ಶೀತ ಲಕ್ಷಣ ಹೊಂದಿರುವವರ ಸಂಖ್ಯೆಯೇ ಅಧಿಕ ಮಟ್ಟದಲ್ಲಿದೆ. ಶೀತ-70, ಸೋಂಕಿನ ಮೂಲ ಪತ್ತೆಯಾಗದ 60, ತೀವ್ರ ಉಸಿರಾಟ-18, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 13, ವಿದೇಶದಿಂದ ಆಗಮಿಸಿದ್ದ ಓರ್ವನಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಎಲ್ಲರನ್ನೂ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ವಿವಿಧ ಆಸ್ಪತ್ರೆಗಳಿಂದ 69 ಮಂದಿ ಕೊರೋನದಿಂದ ಮುಕ್ತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ 1,744 ಮಂದಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2,160 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಹಲವರು ಐಸಿಯು, ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕ ಸೋಂಕಿತರ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 30,297 ಮಂದಿಯ ವರದಿಯನ್ನು ಪರೀಕ್ಷಿಸಲಾಗಿದೆ. ಈ ಪೈಕಿ 26,301 ಮಂದಿಯ ವರದಿ ನೆಗೆಟಿವ್ ಬಂದಿದ್ದು, 3,996 ಮಂದಿಯ ವರದಿಯು ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೃತರಲ್ಲಿ ಮಂಗಳೂರಿನ ಮೂವರು, ಪುತ್ತೂರು ಹಾಗೂ ದಾವಣಗೆರೆಯ ತಲಾ ಓರ್ವ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಬಲಿಯಾದವರಲ್ಲಿ ನಾಲ್ವರು ಮಹಿಳೆಯರಾದರೆ, ಓರ್ವ ಪುರುಷ. ಮೃತರು 54 ವರ್ಷಕ್ಕಿಂತ ಮೇಲ್ಪಟ್ಟವರು.
ಮಂಗಳೂರಿನ 60 ವರ್ಷದ ವೃದ್ಧೆ ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಮಧುಮೇಹ, ತೀವ್ರ ಉಸಿರಾಟ ತೊಂದರೆ, 75 ವರ್ಷದ ವೃದ್ಧೆ ಮೂತ್ರಪಿಂಡ ಸಮಸ್ಯೆ, ಹೆಪಟೈಟಿಸ್-ಬಿ, ಮಧುಮೇಹ, 66 ವರ್ಷದ ವೃದ್ಧೆಯು ಬ್ಯಾಕ್ಟಿರಿಯಲ್ ಇನ್‌ಫೆಕ್ಷನ್, ಮೂತ್ರಪಿಂಡ ವೈಫಲ್ಯ, ಪುತ್ತೂರಿನ 70 ವರ್ಷದ ವೃದ್ಧೆಯು ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಹೆಪಟೈಟಿಸ್-ಬಿ, ದಾವಣಗೆರೆಯ 54 ವರ್ಷದ ಪುರುಷನು ಹೃದಯ ಸ್ತಂಭನ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು.
ಮೃತಪಟ್ಟ ಐವರಲ್ಲೂ ಕೊರೋನ ಸೋಂಕು ಪತ್ತೆಯಾಗಿತ್ತು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಬಲಿಯಾದ 92 ಮಂದಿಯಲ್ಲಿ 16 ಮಂದಿ ಹೊರಜಿಲ್ಲೆಯವರು.
ಉಡುಪಿ ಜಿಲ್ಲೆಯಲ್ಲಿಬುಧವಾರದಂದು ಒಂದೇ ದಿನ 281 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 2686ಕ್ಕೆ ಏರಿಕೆಯಾಗಿದೆ. ಈ ನಡುವೆ, 135 ಮಂದಿಯ ಪರೀಕ್ಷಾ ವರದಿ ಬುಧವಾರದಂದು ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ ಬುಧವಾರದಂದು 24 ಮಂದಿ ಗುಣಮುಖರಾಗಿದ್ದು, ಆ ಮೂಲಕ ಒಟ್ಟು 1369 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಂತಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಬಾರಿಗೆ ಒಂದೇ ದಿನ 101 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 89 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿದ್ದು ಬುಧವಾರ ದೃಢಪಟ್ಟ 101 ಮಂದಿಯಲ್ಲಿ ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 40 ಮಂದಿಗೆ ಸೋಂಕು ದೃಢಪಟ್ಟಿದೆ. ಕುಂಬ್ಡಾಜೆ 15, ಬದಿಯಡ್ಕ 11, ಪನತ್ತಡಿ, ಚೆಂಗಳ ತಲಾ 4, ಪಡನ್ನ, ಕಳ್ಳಾರ್ ತಲಾ 3, ನೀಲೇಶ್ವರ, ಮಧೂರು, ಈಸ್ಟ್ ಎಳೇರಿ, ಚೆಮ್ನಾಡ್ ತಲಾ 2, ಮಂಗಲ್ಪಾಡಿ, ಮೊಗ್ರಾಲ್ ಪುತ್ತೂರು, ಮಂಜೇಶ್ವರ, ಕಾಸರಗೋಡು, ಕಾಞ0ಗಾಡ್, ಪುತ್ತಿಗೆ, ಉದುಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದ್ರಢಪಟ್ಟಿದೆ. ಸೋಂಕಿತರಲ್ಲಿ 10 ವರ್ಷ ಕೆಳಗಿನ ಆರು ಮಕ್ಕಳು ಒಳಗೊಂಡಿದ್ದಾರೆ.
Click this button or press Ctrl+G to toggle between Kannada and English