ಮಂಗಳೂರು :ಶನಿವಾರ ರಾತ್ರಿ ನಗರದ ಫಳ್ನೀರ್ ರಸ್ತೆಯ ಡ್ಯಾನಿಶ್ ಹೊಟೇಲ್ ಎದುರು ರೌಡಿ ಪಾಂಡು ಪೈ ಕೊಲೆ ಪ್ರಕರಣದ ಆರೋಪಿ ಶೈಲೇಶ್ ಯಾನೆ ಬಿಜೈ ರಾಜ ನನ್ನು ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶೈಲೇಶ್ ಯಾನೆ ಬಿಜೈ ರಾಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ವ್ಯಾಪ್ತಿಯ ಪೊಲೀಸರ ತಂಡ ಭಾನುವಾರ ನಾನಾ ಕಡೆ ತೆರಳಿ ತನಿಖೆ ಕೈಗೊಂಡಿದ್ದು, ನಾಲ್ವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಈ ನಡುವೆ ಬಿಜೈ ರಾಜಾ ಕೊಲೆಯನ್ನು ತಾನು ತನ್ನ ಸಹಚರರ ಮೂಲಕ ಮಾಡಿಸಿದ್ದಾಗಿ ಭೂಗತ ಪಾತಕಿ ರವಿ ಪೂಜಾರಿ ಹೇಳಿಕೊಳ್ಳುತ್ತಿದ್ದಾನೆ ಎಂದು ಕೆಲವು ವಾಹಿನಿಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ. ಆದರೆ ಪೊಲೀಸರು ಇದನ್ನು ದೃಢೀಕರಿಸಿಲ್ಲ. ಈ ಕೊಲೆ ಕೃತ್ಯ ನಡೆಸಿದ ಆರೋಪಿಗಳ ಬಗ್ಗೆ ಸುಳಿವು ಲಭ್ಯವಾಗಿದೆ. ಪೊಲೀಸರು ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಮನೀಶ್ ಕರ್ಭೀಕರ್ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಕೊಲ್ಲೂರು ಶ್ರೀಮುಕಾಂಬಿಕಾ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ ಬಳಿಕ ಸಂಜೆ ವೇಳೆಗೆ ಮಂಗಳೂರಿಗೆ ವಾಪಸಾಗಿದ್ದ ಬಿಜೈ ರಾಜ ರಾತ್ರಿ ಫಳ್ನೀರ್ ಬಳಿಯ ತನ್ನ ಸಹೋದರಿ ನಿವಾಸಕ್ಕೆ ತೆರಳುವ ಮಧ್ಯೆ ಯಾವುದೋ ಅಗತ್ಯ ಕಾರ್ಯಕ್ಕಾಗಿ ದಾರಿ ಮಧ್ಯೆ ಕಾಯಿನ್ ಫೋನ್ನಲ್ಲಿ ಕರೆ ಮಾಡಲು ತೆರಳಿದ್ದಾಗ ಕೊಲೆಗೀಡಾಗಿದ್ದಾನೆ.
Click this button or press Ctrl+G to toggle between Kannada and English