ಕೊರೋನ ಪಾಸಿಟಿವ್ ಜುಲೈ 29 : ದಕ್ಷಿಣ ಕನ್ನಡ 208 , ಉಡುಪಿ 173

10:23 PM, Wednesday, July 29th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

corona ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 29 ರಂದು ಬುಧವಾರ 208 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಮತ್ತೆ ಏಳು ಮಂದಿ ಸೋಂಕಿತರು ಸಾವಿಗೀಡಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 142ಕ್ಕೆ ಏರಿದೆ.

ಹೊಸದಾಗಿ ಪತ್ತೆಯಾದ 208 ಪಾಸಿಟಿವ್ ಪ್ರಕರಣಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 65 ಮಂದಿಗೆ ಕೊರೋನ ತಗುಲಿದ್ದರೆ, ತೀವ್ರ ಉಸಿರಾಟ ಸಮಸ್ಯೆ ಮತ್ತು ಶೀತ ಲಕ್ಷಣದ 85 ಪ್ರಕರಣಗಳಿವೆ. ಬರೋಬ್ಬರಿ 58 ಪ್ರಕರಣಗಳಲ್ಲಿ ಸೋಂಕು ಎಲ್ಲಿಂದ ಹರಡಿದೆ ಎನ್ನುವ ಮಾಹಿತಿಯೇ ಇಲ್ಲ. ಈ ಎಲ್ಲರನ್ನು ವಿವಿಧ ಖಾಸಗಿ, ಕೋವಿಡ್ ಆಸ್ಪತ್ರೆಯಲ್ಲಿ, ಗೃಹ ನಿಗಾವಣೆ, ಕೊರೋನ ಕೇರ್ ಸೆಂಟರ್‌ಗಳಿಗೆ ದಾಖಲಿಸಲಾಗಿದೆ.

ಕೊರೋನ ಸೋಂಕಿನೊಂದಿಗೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಪಡುಬಿದ್ರಿಯ 52 ವರ್ಷದ ವ್ಯಕ್ತಿ, ಬಂಟ್ವಾಳದ 62 ವರ್ಷದ ವ್ಯಕ್ತಿ, ಮಂಗಳೂರಿನ 69 ವರ್ಷದ ವೃದ್ಧೆ ಹಾಗೂ 73 ವರ್ಷದ ವೃದ್ಧ, ಧಾರವಾಡದ 66 ವರ್ಷದ ವೃದ್ಧ, ಕಾರವಾರದ 66 ವರ್ಷದ ವೃದ್ಧ ಹಾಗೂ ಮಂಗಳೂರಿನ 39 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಆಶಾದಾಯಕ ಬೆಳವಣಿಗೆಯಲ್ಲಿ ಕೊರೋನಾ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ 118 ಮಂದಿ ಬುಧವಾರ ಗುಣಮುಖರಾಗಿದ್ದಾರೆ. ಅವರಲ್ಲಿ ಅನೇಕ ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5311 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 2456 ಮಂದಿ ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 2715 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯಲ್ಲಿರುವವರಲ್ಲಿ ಬಹುತೇಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಹೆಚ್ಚಿನವರಿಗೆ ಸೋಂಕಿನ ಲಕ್ಷಣ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿವಿಧ ಆಸ್ಪತ್ರೆಗಳಲ್ಲಿ ಇತರ ಗಂಭೀರ ಕಾಯಿಲೆಗಳಿಂದ 10ಕ್ಕೂ ಅಧಿಕ ಮಂದಿ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯಲ್ಲಿ ಬುಧವಾರ ಮತ್ತೆ 173 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೊಂಕಿತರ ಸಂಖ್ಯೆ 3895 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 25 ಮಂದಿ ಸಾವನ್ನಪ್ಪಿದ್ದು, ಸದ್ಯ 1547 ಸಕ್ರಿಯ ಪ್ರಕರಣಗಳಿವೆ. ಬುಧವಾರದಂದು 173 ವರದಿ ಪಾಸಿಟಿವ್‌‌ ಬಂದಿದ್ದು, 487 ವರದಿ ನೆಗೆಟಿವ್‌ ಬಂದಿದೆ. ಇನ್ನೂ 835 ವರದಿಗಳು ಬರಲು ಬಾಕಿ ಇವೆ. ಈವರೆಗೆ ಜಿಲ್ಲೆಯಲ್ಲಿ 2323 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English