ಬಂಟ್ವಾಳ: ಕೊಡಗು ಜಿಲ್ಲೆಯ ತಲಕಾವೇರಿ ಭಾಗದಲ್ಲಿ ಗುಡ್ಡ ಜರಿದು ಅರ್ಚಕರ ಮನೆ ಸಮಾಧಿಯಾದ ದುರಂತ ಪ್ರಕರಣದಲ್ಲಿ ನಾಪತ್ತೆಯಾಗಿರುವ ನಾಲ್ವರಲ್ಲಿ ಬಂಟ್ವಾಳ ಮೂಲದ ಯುವ ಅರ್ಚಕರೊಬ್ಬರೂ ಸೇರಿದ್ದಾರೆ ಎಂಬ ಮಾಹಿತಿ ಇದೀಗ ಲಭಿಸಿದೆ.
ಬಂಟ್ವಾಳ ಮೂಲದ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ್ ಈ ದುರಂತದಲ್ಲಿ ನಾಪತ್ತೆಯಾಗಿರಬಹುದೆಂದು ಇದೀಗ ಶಂಕಿಸಲಾಗುತ್ತಿದೆ.
24 ವರ್ಷದ ರವಿಕಿರಣ್ ಅವರು ರಾಮಕೃಷ್ಣ ಮತ್ತು ರೇಣುಕಾ ಭಟ್ (ಅಪ್ಪು ಭಟ್) ದಂಪತಿಯ ಪುತ್ರನಾಗಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಊರಿನಲ್ಲೇ ಇದ್ದ ರವಿಕಿರಣ್ ಅವರು ಬಳಿಕ ಅಲ್ಲಿನ ದೇವಸ್ಥಾನದ ಆರ್ಚಕರು ಮರಳಿ ಕರೆದ ಹಿನ್ನೆಲೆಯಲ್ಲಿ ತಲಕಾವೇರಿಗೆ ತೆರಳಿದ್ದರು.
ರವಿ ಅವರು ಕಳೆದ ಎರಡು ವರ್ಷಗಳಿಂದ ತಲಕಾವೇರಿ ದೇವಸ್ಥಾನದಲ್ಲಿ ಅರ್ಚಕರ ಜೊತೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಬಾರೀ ಮಳೆ ಸುರಿಯುತ್ತಿದ್ದು ಕಾವೇರಿ ನದಿಯ ಉಗಮ ಸ್ಥಾನವಾಗಿರುವ ತಲಕಾವೇರಿ ಪ್ರದೇಶದಲ್ಲೂ ಧಾರಾಕಾರ ಮಳೆಯಾಗುತ್ತಿದೆ.
ಭಾರೀ ಮಳೆಯ ಕಾರಣದಿಂದ ದೇವಸ್ಥಾನದ ಅರ್ಚಕರು ವಾಸವಿದ್ದ ಮನೆಯ ಹಿಂಭಾಗದ ಗುಡ್ಡ ಇಂದು ಜರಿದುಬಿದ್ದಿತ್ತು ಮತ್ತು ಗುಡ್ಡದ ಮಣ್ಣಿನಡಿಯಲ್ಲಿ ಈ ಮನೆ ಸಮಾಧಿಯಾಗಿದೆ.
ದುರಂತ ಸಂಭವಿಸಿದ ಸಂದರ್ಭದಲ್ಲಿ ಈ ಮನೆಯಲ್ಲಿ ಕನಿಷ್ಟ ನಾಲ್ಕು ಜನರಿದ್ದಿರಬಹುದು ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು. ಅವರಲ್ಲಿ ಬಂಟ್ವಾಳ ಮೂಲದ ರವಿಕಿರಣ್ ಅವರೂ ಒಬ್ಬರೆಂದು ಇದೀಗ ಶಂಕಿಸಲಾಗುತ್ತಿದೆ.
ತಲಕಾವೇರಿ ಗುಡ್ಡ ಕುಸಿತ ದುರಂತದಲ್ಲಿ ಬಂಟ್ವಾಳದ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ ಎಂಬವರು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಅವರು ವಿರಾಜಪೇಟೆ ಶಾಸಕರಾಗಿರುವ ಕೆ.ಜೆ. ಬೋಪಯ್ಯರವರನ್ನು ಸಂಪರ್ಕಿಸಿ ಘಟನೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು ಮಳೆಯ ತೀವ್ರತೆ ಹಾಗೂ ಅಲ್ಲಲ್ಲಿ ಗುಡ್ಡಜರಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ಕಾರ್ಯಾಚರಣೆಗೆ ಅಡ್ಡಿಯಾಗಿರುವ ಬಗ್ಗೆ ಬೋಪಯ್ಯ ಅವರು ರಾಜೇಶ್ ನಾಯ್ಕ್ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English