ಹೈದರಾಬಾದ್: ಜೀವಿತಾವಧಿಯಲ್ಲಿ ಅಂದಾಜು 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಪಾದಿಸಿದ ತಂದೆಯನ್ನು ಬೀದಿಗೆ ತಳ್ಳಿ ಅವರ ಹೆಸರಿನಲ್ಲಿದ್ದ 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹಂಚಿಕೊಂಡ ಘಟನೆ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಮಧಿರಾ ಎಂಬಲ್ಲಿ ನಡೆದಿದೆ.
ಕೊನೆಗೆ ಅಣ್ಣತಮ್ಮಂದಿರು ವಯಸ್ಸಾದ ಅಪ್ಪನ ಜವಾಬ್ದಾರಿ ಹೊರಲು ನಿರಾಕರಿಸಿ ಬೀದಿಗೆ ತಳ್ಳಿದ್ದಾರೆ. ಬೀದಿಗೆ ಬಿದ್ದ ವೃದ್ಧರಿಗೆ ಗ್ರಾಮದ ಜನರು ಊಟ ಕೊಡಲು ಮುಂದಾದರೆ, ಕೊಡದಂತೆ ಅವರನ್ನೂ ಬೆದರಿಸಿದ್ದ ಅವರ ಗತಿ ಏನಾಯಿತು ನೋಡಿ.
ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಮಧಿರಾ ಗ್ರಾಮದ ಪೋತು ಸುಧಾಕರ್ (45), ಪೋತು ಜನಾರ್ದನ (48) ಮತ್ತು ಪೋತು ರವೀಂದರ್ (52) ಈ ಅಮಾನವೀಯ ಕೃತ್ಯ ಎಸಗಿದ್ದಾರೆ.
ಇದೀಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಈ ಮೂವರು ‘ವರ’ಪುತ್ರರ ತಂದೆ ಪೋತು ಮಲ್ಲಯ್ಯ (79) ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋತು ಮಲ್ಲಯ್ಯ ಅವರು ತಮ್ಮ ಜೀವಿತಾವಧಿಯಲ್ಲಿ ಅಂದಾಜು 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾಡಿದ್ದರು. ಅಲ್ಲದೆ, 6 ಎಕರೆ ಭೂಮಿಯನ್ನು ಪತ್ನಿಯ ಹೆಸರಿಗೆ ನೋಂದಾಯಿಸಿಕೊಟ್ಟಿದ್ದರು. ಸಾಕಷ್ಟು ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಮಾಡಿಸಿದ್ದರು. ಈ ಎಲ್ಲ ಆಸ್ತಿ ಮತ್ತು ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಅವರ ಮೂವರೂ ಮಕ್ಕಳು ಸಮನಾಗಿ ಹಂಚಿಕೊಂಡಿದ್ದರು. ಆದರೆ, ಭೂಮಿ ತಾಯಿಯ ಹೆಸರಿನಲ್ಲಿ ಇದ್ದುದರಿಂದ ಅವರಿಗೆ ಏನೂ ಮಾಡಲಾಗಿರಲಿಲ್ಲ.
ಆಸ್ತಿ ಎಲ್ಲವೂ ತಮ್ಮ ಹೆಸರಿಗೆ ನೋಂದಾಣಿಯಾಗುತ್ತಲೇ ಬಾಲ ಬಿಚ್ಚಿದ ‘ವರ’ಪುತ್ರರು, ತಮ್ಮ ತಂದೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಒಬ್ಬೊಬ್ಬರಾಗಿ ನಿರಾಕರಿಸುತ್ತಾ ಮನೆಯಿಂದ ಹೊರಹಾಕಿದರು. ಈ ‘ವರ’ಪುತ್ರರನ್ನು ಕರೆದು, ಭೇಟಿಯಾದ ಗ್ರಾಮಸ್ಥರು ಹಾಗೆ ಮಾಡದಂತೆ ಮನವಿ ಮಾಡಿಕೊಂಡರೂ ಒಪ್ಪಲಿಲ್ಲ. ಪೊಲೀಸರ ಮೂಲಕ ಹೇಳಿಸಲು ಗ್ರಾಮಸ್ಥರು ಮಾಡಿದ ಪ್ರಯತ್ನಗಳೂ ವಿಫಲವಾದವು.
ಕೊನೆಗೆ ಗ್ರಾಮದಲ್ಲಿ ಬೀದಿ, ಬೀದಿ ಅಲೆಯುತ್ತಾ, ಬೀದಿ ಬದಿಯ ಜಗಲಿಯ ಮೇಲೆ ಮಲಗಿಕೊಳ್ಳುತ್ತಿದ್ದ ವೃದ್ಧ ಮಲ್ಲಯ್ಯ ಅವರಿಗೆ ಗ್ರಾಮಸ್ಥರು ಊಟ ಕೊಟ್ಟು ಸಮಾಧಾನಪಡಿಸುತ್ತಿದ್ದರು. ಆದರೆ, ತಮ್ಮ ತಂದೆಗೆ ಊಟ ಕೊಟ್ಟವರೊಂದಿಗೆ ಜಗಳಕ್ಕಿಳಿಯುತ್ತಿದ್ದ ‘ವರ’ಪುತ್ರರು, ಊಟ ಕೊಡದಂತೆ ತಾಕೀತು ಮಾಡುತ್ತಿದ್ದರು. ತಮ್ಮ ಮಾತು ಮೀರಿ ಕೊಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಲ್ಲಯ್ಯ ಅವರನ್ನು ವೃದ್ಧಾಶ್ರಮಕ್ಕೆ ದಾಖಲಿಸಿದ್ದರು.
ತಮ್ಮ ತಾಯಿಯ ಹೆಸರಿನಲ್ಲಿದ್ದ 6 ಎಕರೆ ಭೂಮಿಯನ್ನು ಲಪಟಾಯಿಸಲು ಹುನ್ನಾರ ನಡೆಸಿದ ಒಬ್ಬ ‘ವರ’ಪುತ್ರ ತಾಯಿಯನ್ನು ತನ್ನೊಂದಿಗೆ ಇಟ್ಟುಕೊಂಡಿದ್ದರಿಂದ ಆ ಹಿರಿಜೀವಕ್ಕೆ ಕನಿಷ್ಠಪಕ್ಷ ತಲೆ ಮೇಲೆ ಸೂರಾದರೂ ಸಿಕ್ಕಿತ್ತು.
ವೃದ್ಧಾಶ್ರಮದಲ್ಲಿದ್ದ ಮಲ್ಲಯ್ಯ ಅವರು ಕೆಲದಿನಗಳ ಹಿಂದೆ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪರಿಸ್ಥಿತಿಯನ್ನು ವಿವರಿಸಿ ಮಧಿರಾ ಗ್ರಾಮದ ಗ್ರಾಮಲೆಕ್ಕಿಗರು ಖೇಡಾ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ‘ವರ’ಪುತ್ರರನ್ನು ಬಂಧಿಸಿ, ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕ್ಷೇಮಾಭಿವೃದ್ಧಿ ಕಾಯ್ದೆ, 2007ರ 24ನೇ ವಿಧಿ ಮತ್ತು ಐಪಿಸಿ 420ರ ಪ್ರಕಾರ ಆರೋಪ ಹೊರಿಸಿ ಬಂಧಿತರನ್ನು ಹುಜುರಾಬಾದ್ ಜೈಲಿನಲ್ಲಿ ಇರಿಸಲಾಗಿದೆ ಎಂದು ಖೇಡಾ ಠಾಣೆ ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English