ಹಾಸ್ಯ ಸಾಹಿತಿ, ನಟ ಶೇಖರ ಭಂಡಾರಿ ಕೊರೋನಾ ದಿಂದ ಮೃತ್ಯು

8:57 PM, Monday, August 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

shekar bhandary ಮಂಗಳೂರು: ನಾಟಕ ಚಲನಚಿತ್ರ ನಟ, ಹಾಸ್ಯ ಸಾಹಿತಿ, ಪ್ರಾಸ ಕವಿ ಕಾರ್ಕಳ ಶೇಖರ ಭಂಡಾರಿ (72.) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೆಲವು ದಿನಗಳ ಹಿಂದೆ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಸೋಮವಾರ ನಿಧನರಾದರು. ಅವರ ಗಂಟಲ ದ್ರವ ಪರೀಕ್ಷಾ ವರದಿ ಇಂದು ತಲುಪಿದ್ದು ಅವರಿಗೆ ಕೋವಿಡ್ ಸೋಂಕು ದೃಢವಾಗಿತ್ತು.

ಕೈಬೆರಳು ರಹಸ್ಯ, ನಿಮ್ಮ ಯಾವ ಬೆರಳಿನಲ್ಲಿ ಅದೃಷ್ಟವಿದೆ ನೋಡಿ !

ಶೇಖರ ಭಂಡಾರಿ ಕಾರ್ಕಳದ ಬೆಟ್ಟದ ಮನೆ ಬಾಬು ಭಂಡಾರಿ ಮತ್ತು ಅಭಯ ಭಂಡಾರಿ ದಂಪತಿಯ ಪುತ್ರರಾಗಿ ಜನಿಸಿದ್ದು, ಸಣ್ಣ ವಯಸ್ಸಿನಿಂದಲೂ ನಾಟಕ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸುತ್ತಾ ಹಾಸ್ಯನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ವಿವಿಧ ಪಾತ್ರಗಳನ್ನು ಅಭಿನಯಿಸುತ್ತಾ ಚಲನಚಿತ್ರ ನಟರಾಗಿ ಗುರುತಿಸಿ ಕೊಂಡಿದ್ದರು. ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕಂಬೈನ್ಸ್ ಪ್ರಸ್ತುತಿಯ, ಭಂಡಾರಿ ಸಮಾಜದ ಯುವ ನಾಯಕ, ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಇವರ ನಾಯಕನಟ ಅಭಿನಯದ `ಅಂಬರ್ ಕೇಟರರ್ಸ್’ ಚಲನಚಿತ್ರದಲ್ಲಿ ಪೊಲಿಸ್ ಇನ್ಸ್ ಪೆಕ್ಟರ್ ಆಗಿ ಅಭಿನಯಿಸಿದ್ದರು.

ಸಾಹಿತ್ಯ ಕ್ಷೇತ್ರದಲ್ಲಿಯೂ ಕೃಷಿ ಮಾಡಿದ್ದರು. ವಿಜಯ ಬ್ಯಾಂಕ್‌ ನಿವೃತ್ತ ಉದ್ಯೋಗಿಯಾಗಿದ್ದ ಭಂಡಾರಿ ಪ್ರಾಸ ಭಂಡಾರ ಸರಣಿಯ `ಮಸ್ತಕದಿಂದ ಪುಸ್ತಕಕ್ಕೆ’ ಕೃತಿ ಇತ್ತೀಚೆಗಷ್ಟೇ ಪ್ರಕಟಿಸಿದ್ದರು. ಪ್ರಾಸಬದ್ಧವಾಗಿ ಕವನಗಳನ್ನು ರಚಿಸುತ್ತಾ, ಚುಟುಕುಗಳ ಸರಮಾಲೆಯನ್ನೇ ಹೆಣೆಯುತ್ತಾ ತಮ್ಮ ಭಾಷಣಗಳಲ್ಲಿ ಜನತೆಯನ್ನು ತನ್ನತ್ತ ಆಕರ್ಷಿಸುತ್ತಿದ್ದರು.

ಬೆಂಗಳೂರು ಭಂಡಾರಿ ಸಮಾಜ ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಶೇಖರ ಭಂಡಾರಿಯವರು 2012-14ರ ಅವಧಿಯಲ್ಲಿ ಬೆಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಾರ್ನಾಡು ಭಂಡಾರಿ ಕುಟುಂಬಸ್ಥರ ಗುರುಕಾರರಾಗಿದ್ದ ಇವರು ಮಂಗಳೂರು ಭಂಡಾರಿ ಸಮಾಜ ಸಂಘದ ಹಾಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಡುಪಿ ಬಾರ್ಕೂರಿ ಇಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಂಸ್ಥಾಪಕ ಟ್ರಸ್ಟಿಗಳಾಗಿ ಕಾರ್ಯ ನಿರ್ವಹಿಸಿ, ಕಚ್ಚೂರು ಕೋ.ಅಪರೇಟಿವ್ ಸೊಸೈಟಿಯ ನಿರ್ದೇಶಕರಾಗಿಯೂ ಶ್ರಮಿಸಿ ಭಂಡಾರಿ ಸಮಾಜ ಸಂಘದ ಬಹುತೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

2019ರ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಶೇಖರ್ ವಿಜಯಾ ಬ್ಯಾಂಕ್‍ನ ವಿಜಯಶ್ರೀ ಪ್ರಶಸ್ತಿ, ಡಾ| ರಾಜ್ ಕುಮಾರ್ ಸದ್ಭಾವನಾ ಪ್ರಶಸ್ತಿ, ವೀರ ಕನ್ನಡಿಗ ಪ್ರಶಸ್ತಿ, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಪುರಸ್ಕಾರ, ಡಾಕ್ಟರ್ ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ ಹೀಗೆ ನೂರಾರು ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದರು.

ಮೃತರು ಪತ್ನಿ ವಾರಿಜಾ ಶೇಖರ್, ಮಕ್ಕಳಾದ ಪ್ರೀತಿ ಪದ್ಮನಾಭ್ ಮತ್ತು ಸ್ವಾತಿ ಶರತ್, ಮೊಮ್ಮಕ್ಕಳು, ಅಪಾರ ಸಂಖ್ಯೆಯ ಕಲಾಭಿಮಾನಿಗಳು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

ತಮ್ಮ ಜೀವನ ನಾಟಕದ ಕೊನೆಯ ಪರದೆಯನ್ನು ಎಳೆದು ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ ಎಂದು ಶೇಖರ ಭಂಡಾರಿ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿ ಅಗಲಿದ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ, ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಅಖಂಡ ಭಂಡಾರಿ ಸಮಾಜ, ವಿಶ್ವ ಭಂಡಾರಿ ಸಮಾಜ ಸಂಘಟನೆಗಳ ಒಕ್ಕೂಟ ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‍ನ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಗೌರವ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಅಧ್ಯಕ್ಷ ನ್ಯಾ| ಆರ್. ಎಂ ಭಂಡಾರಿ, ಮಾಜಿ ಅಧ್ಯಕ್ಷರಾದ ನ್ಯಾ| ಸುಂದರ ಜಿ.ಭಂಡಾರಿ,ಬಾಲಕೃಷ್ಣ ಪಿ.ಭಂಡಾರಿ, ಬಾಲಕೃಷ್ಣ ಪುತ್ತೂರು (ಪುಣೆ), ನ್ಯಾ| ಶೇಖರ್ ಎಸ್.ಭಂಡಾರಿ, ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಚಲನಚಿತ್ರ ನಟ ಕಡಂದಲೆ ಸೌರಭ್ ಎಸ್.ಭಂಡಾರಿ, ನವೀನ್ ಭಂಡಾರಿ ಉಡುಪಿ, ಭಂಡಾರಿ ಮಹಾ ಮಂಡಲ (ರಿ.) ಬಾರ್ಕೂರು ಮತ್ತು ಕಚ್ಚೂರು ಕೋ.ಆಪರೇಟಿವ್ ಸೊಸೈಟಿಯ ಸದಸ್ಯರು, ಭಂಡಾರಿ ವಾರ್ತೆ ಮಾಧ್ಯಮ ಮಂಡಳಿ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English