ಬಂಟ್ವಾಳ : ಹಳೆಯ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲಿದ್ದ ಯುವಕ ಮೃತಪಟ್ಟು, ಬಾಲಕ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಮುಂಜೆ ಎಂಬಲ್ಲಿ ನಡೆದಿದೆ.
ಅಮ್ಮುಂಜೆ ಗ್ರಾಮದ ಮಾದಕೋಡಿ ಎಂಬಲ್ಲಿ ಘಟನೆ ನಡೆದಿದ್ದು, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಗುಡ್ಡೆ ಮನೆ ನಿಲಯ್ಯ ಪೂಜಾರಿ ಎಂಬವರ ಪುತ್ರ ಜನಾರ್ಧನ ಅಂಚನ್ (35) ಮೃತಪಟ್ಟಿದ್ದಾರೆ. ಉಳಿದಂತೆ ಬಾಲಕ ವೃಷಭ (11) ಹಾಗೂ ಸೂರಜ್ (20) ಘಟನೆ ಯಲ್ಲಿ ಅಲ್ಪಸ್ವಲ್ಪ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಮ್ಮುಂಜೆ ಗ್ರಾಮದ ಧಾರ್ಮಿಕ ಕ್ಷೇತ್ರದಲ್ಲಿ ಹಳೆಯ ಕಟ್ಟಡದ ಗೋಡೆಯನ್ನು ತೆಗೆಯುವ ಕೆಲಸ ಶ್ರಮದಾನದ ಮೂಲಕ ನಡೆಯುತ್ತಿತ್ತು. ಈ ವೇಳೆ ಹಳೆಯ ಕಟ್ಟಡದ ಗೋಡೆಯ ಕಲ್ಲು ಜನಾರ್ಧನ ಅವರ ಮೈಮೇಲೆ ಬಿದ್ದ ಪರಿಣಾಮ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಅಪರಾಧ ವಿಭಾಗದ ಎಸ್.ಐ. ಸಂಜೀವ ಕೆ.ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English