ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ 36ನೇ ವರ್ಷದ ರಾಷ್ಟೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯನ್ನು ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ನಡೆಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಈ ಬಾರಿ ಶ್ರೀಕೃಷ್ಣ ವೇಷ ಸ್ಪರ್ಧೆಯ ವಿಶೇಷತೆ ಅಂದರೆ ಸ್ಪರ್ಧಿಗಳು ವಿಶ್ವದ ಯಾವ ಮೂಲೆಯಿಂದ ಬೇಕಾದರೂ ಭಾಗವಹಿಸಬಹುದು. ಮೂರು ನಿಮಿಷದ ವಿಡಿಯೋ ಮೂಲಕ ಶ್ರೀಕೃಷ್ಣ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
‘ಶ್ರೀಕೃಷ್ಣ ವೇಷ ಸ್ಪರ್ಧೆ’ ಸೆ.10ರಂದು ನಡೆಯಲಿದ್ದು, ಮನೆಯಿಂದಲೇ ಚಿತ್ರೀಕರಿಸಿ ಸೆ.7ರೊಳಗೆ ಆಯಾ ವಿಭಾಗಕ್ಕೆ ಒದಗಿಸಲಾಗಿರುವ ಇ ಮೇಲ್ ಮೂಲಕ ಕಳುಹಿಸಬಹುದಾಗಿದೆ ಕಲ್ಕೂರ ತಿಳಿಸಿದ್ದಾರೆ.
ಇದಕ್ಕಾಗಿ ಪ್ರತಿ ವಿಭಾಗಕ್ಕೆ ಪ್ರತ್ಯೇಕ ಇಮೇಲ್ ಐಡಿ ನೀಡಲಾಗಿದ್ದು, ಗರಿಷ್ಠ 3 ನಿಮಿಷದೊಳಗಿನ ವೀಡಿಯೋವನ್ನು ಕಳುಹಿಸಬೇಕು. ಸೆ.10ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಆನ್‌ಲೈನ್ ಮೂಲಕ ನೇರ ಪ್ರಸಾರದಲ್ಲಿ ವಿಜೇತ ಮಕ್ಕಳ ವೀಡಿಯೋ ಪ್ರಸಾರ ಮಾಡಲಾಗುವುದು ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಕದ್ರಿ ಮಂಜುನಾಥ ಕ್ಷೇತ್ರದ ಆವರಣದಲ್ಲಿ ಪ್ರತಿ ವರ್ಷ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್‌ನಿಂದಾಗಿ ಈ ಬಾರಿ ಅಸಾಧ್ಯವಾಗಿದೆ. ಆದರೆ ಈ ಬಾರಿ ಮನೆಗಳಲ್ಲಿಯೇ ಹೆತ್ತವರು, ಮನೆ ಮಂದಿಯೆಲ್ಲಾ ಜತೆಯಾಗಿ ಚಿತ್ರೀಕರಣವನ್ನು ಅವರಿಗೆ ಇಷ್ಟದ ರೀತಿಯಲ್ಲಿ ಮಾಡಲು ಸಾಧ್ಯವಾಗಲಿದೆ ಎಂದವರು ಹೇಳಿದರು.
ಈ ಬಾರಿ ತೊಟ್ಟಿಲ ಹಬ್ಬದ ಸಂಭ್ರಮದಲ್ಲಿರುವ ಮಗುವಿಗೆ ಸಾಧಾರಣ ಕೃಷ್ಣನ ವೇಷ ಹಾಕಿಸಿ ವೀಡಿಯೋ ಮಾಡುವ ಅವಕಾಶವಿದೆ. ಇದೇ ವೇಳೆ ಕೃಷ್ಣ ವ ವೇಷಧಾರಿಯೊಂದಿಗೆ ಮನೆಮಂದಿಯೆಲ್ಲಾ ಸೇರಿ ಮರ, ಗಿಡ ನೆಡುವ ವೀಡಿಯೋ ಮೂಲಕ ವೃಕ್ಷ ಕೃಷ್ಣ ಸ್ಪರ್ಧೆಯನ್ನೂ ಅಳವಡಿಸಲಾಗಿದೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ಇದಲ್ಲದೆ ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ ಸೇರಿದಂತೆ ಒಟ್ಟು 32 ವಿಭಾಗಗಳಲ್ಲಿ ವಿವಿಧ ವಯೋಮಾನದ ಮಕ್ಕಳ ಸ್ಪರ್ಧೆ ನಡೆಯಲಿದೆ. ವಿಶ್ವಾದ್ಯಂತ ಮಕ್ಕಳು ಕೃಷ್ಣ ವೇಷಧಾರಿಯಾಗಿ ಭಾಗವಹಿಸಬಹುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0824- 2492239, 9845083736ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೌಶಿಕ್ ಕಲ್ಲೂರಾಯ, ಕದ್ರಿ ನವನೀತ ಶೆಟ್ಟಿ, ದಯಾನಂದ, ಜಿ.ಕೆ. ಭಟ್ ಸೇರಾಜೆ, ವಿಜಯಲಕ್ಷ್ಮೀ, ರತ್ನಾಕರ ಜೈನ್, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು
Click this button or press Ctrl+G to toggle between Kannada and English