ಆರ್ಥಿಕ ಮುಗ್ಗಟ್ಟಿನಿಂದಾಗಿ ಕುಂದಾಪುರ – ತಲಪಾಡಿ ನಡುವಿನ ಚತುಷ್ಪಥ ಕಾಮಗಾರಿ ಕುಂಠಿತ

4:59 PM, Thursday, December 6th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Kundapur Talapady projectಮಂಗಳೂರು :ಕುಂದಾಪುರ- ಸುರತ್ಕಲ್ ಮತ್ತು ನಂತೂರು- ತಲಪಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆಯನ್ನು 2010ರ ಸೆ.5ರಲ್ಲಿ ನವಯುಗ ಎಂಜಿನಿಯರಿಂಗ್ ಕಂಪನಿ ವಹಿಸಿಕೊಂಡಿದ್ದು 910 ದಿನ ಅಂದರೆ 2013ರ ಮಾ.5ಕ್ಕೆ ಮುಗಿಸುವ ಒಪ್ಪಂದವಾಗಿತ್ತು. ಅದರಂತೆ ಪ್ರಾರಂಭದಲ್ಲಿ ಕಾಮಗಾರಿ ಶರವೇಗದಲ್ಲಿ ನಡೆಯುವ ಮೂಲಕ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಇದೀಗ ಗುತ್ತಿಗೆ ಪಡೆದಿರುವ ಕಂಪನಿ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನಿಂದಾಗಿ ಮಳೆಗಾಲದ ನಂತರ ಕಾಮಗಾರಿ ಪುನಾರಂಭಗೊಂಡಿಲ್ಲ.

ತಿಂಗಳಿಗೆ ಕನಿಷ್ಠ 10 ಕಿ.ಮೀ. ಕಾಮಗಾರಿ ಮುಗಿಸಬೇಕು ಎಂಬ ಉದ್ದೇಶವಿದ್ದರೂ, ಈಗಿನ ಆರ್ಥಿಕ ಮುಗ್ಗಟ್ಟಿನಿಂದಾಗಿ ಅವಧಿಗೆ ಮುಗಿಸುವುದು ಅಸಾಧ್ಯವಾಗಿದೆ. ಪ್ರಾರಂಭದಲ್ಲಿ ಸರಕಾರಿ ಜಮೀನು ಲಭ್ಯವಿದ್ದ ಕಾರಣ ಕಾಮಗಾರಿ ವೇಗವಾಗಿ ನಡೆದಿತ್ತು. ಈಗ ಭೂಸ್ವಾಧೀನ ಸಮಸ್ಯೆ, ಜಾಗತಿಕ ಹಣಕಾಸು ಮುಗ್ಗಟ್ಟು ಇದರ ಮೇಲೆ ಪರಿಣಾಮ ಬೀರಿದೆ. ಹಣಕಾಸು ಕಂಪನಿಗಳು ಬಿಒಟಿ ಮಾದರಿಯ ಹೆದ್ದಾರಿ ನಿರ್ಮಾಣಕ್ಕೆ ಸಾಲ ನೀಡುತ್ತಿಲ್ಲ. ಈ ಸಮಸ್ಯೆ ನವಯುಗ ಕಂಪನಿಯನ್ನೂ ಬಿಟ್ಟಿಲ್ಲ.

ಸುಮಾರು 750 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದ ನವಯುಗ ಕಂಪನಿ ಈವರೆಗೆ ಸುಮಾರು 320 ಕೋಟಿ ರೂಪಾಯಿಗಳನ್ನು ಹಾಗೂ ಹೆದ್ದಾರಿ ಪ್ರಾಧಿಕಾರ 80 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿವೆ. ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನಕ್ಕಾಗಿ 275 ಕೋಟಿ ಖರ್ಚು ಮಾಡುತ್ತಿದ್ದು, ಅದರಲ್ಲಿ 190 ಕೋಟಿ ರೂ. ಸಂತ್ರಸ್ತರಿಗೆ ವಿತರಿಸಲು ಕುಂದಾಪುರ ಮತ್ತು ಮಂಗಳೂರು ಉಪವಿಭಾಧಿಕಾರಿಗಳ ಬಳಿ ಠೇವಣಿ ಇರಿಸಿದೆ. ಹೆದ್ದಾರಿ ಪ್ರಾಧಿಕಾರದ ಬಳಿ ಹಣವಿದ್ದರೂ, ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಿದರೆ ಮಾತ್ರ ಕಂಪನಿಗೆ 140 ಕೋಟಿ ರೂ. ನೀಡಲಿದೆ. ಶೇ.30 ವಿಜಿಎಫ್ ಕೊಡಬೇಕು ಎಂಬುದು ನಿಯಮ.

ಈಗಾಗಲೇ ಒಟ್ಟು ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ.40 ನಡೆಯಬೇಕಾಗಿದೆ. ಒಟ್ಟು 90 ಕಿ.ಮೀ. ಪೈಕಿ, 51 ಕಿ.ಮೀ. ಮುಗಿಸಲಾಗಿದೆ. ಆರ್ಥಿಕ ತೊಂದರೆ ಇದ್ದರು ನವೆಂಬರ್ ಅಂತ್ಯದೊಳಗೆ ಹಣಕಾಸಿನ ವ್ಯವಸ್ಥೆ ಯನ್ನು ಸರಿಪಡಿಸಿ ಡಿಸೆಂಬರ್ ತಿಂಗಳಿಂದ ಪುನ: ಕಾಮಗಾರಿ ಚಾಲನೆಗೊಳ್ಳಲಿದೆ ಎಂದು ನವಯುಗ ಸಂಸ್ಥೆಯ ಡೆಪ್ಯುಟಿ ಪ್ರೊಜೆಕ್ಟ್ ಮ್ಯಾನೇಜರ್ ಅಶೋಕ ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English