ಹುಬ್ಬಳ್ಳಿ : ಶಿಕ್ಷಕರು ದೇಶದ ನಿರ್ಮಾತೃಗಳು. ಪ್ರತಿಯೊಬ್ಬರ ಜೀವನವನ್ನು ರೂಪಿಸುವ ಶಿಕ್ಷಕ ವೃತ್ತಿಗೆ ಪ್ರಥಮ ಆದ್ಯತೆಯಿದೆ. ಇಂದಿನ ಮಕ್ಕಳಲ್ಲಿ ಪುಸ್ತಕ ಜ್ಞಾನ ಹೆಚ್ಚುತ್ತಿದೆ. ಆದರೆ ಉತ್ತಮ ಸಂಸ್ಕಾರ ಬೆಳವಣಿಗೆಯಾಗುತ್ತಿಲ್ಲ. ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಶಿಕ್ಷಕರು ಬೆಳಸಬೇಕು ಎಂದು ಶಾಸಕ ಅಬ್ಬಯ್ಯ ಪ್ರಸಾದ್ ಹೇಳಿದರು.
ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ, ನಗರದ ಘಟಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳು ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗುತ್ತಿದ್ದಾರೆ. ಇದರೊಂದಿಗೆ ಮೌಲ್ಯ ಹಾಗೂ ಸಂಸ್ಕಾರವು ಬೆಳೆಯಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದ ಪ್ರಮುಖ ಗುರಿ. ಶಿಕ್ಷಣ, ಆರೋಗ್ಯ ಹಾಗೂ ಭೂಮಿ ರಾಷ್ಟ್ರೀಕರಣವಾಗಬೇಕು ಎಂಬುದು ಸಂವಿಧಾನ ನಿರ್ಮಾತೃಗಳ ಆಶಯವಾಗಿತ್ತು. ಸ್ಥಿತಿವಂತರು, ಶ್ರೀಮಂತರು ಹಾಗೂ ಬಲಿಷ್ಠರಿಗೆ ಮಾತ್ರ ಇವುಗಳು ಲಭ್ಯವಾಗಬಾರದು. ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಸ್ವತಂತ್ರ ನಂತರದಲ್ಲಿ ಉತ್ತಮ ಶಿಕ್ಷಣ ನೀತಿಗಳನ್ನು ರೂಪಿಸಿದರು. ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿ ಎಲ್ಲಾ ವರ್ಗದ ಜನರು ಶಿಕ್ಷಣ ಪಡೆಯುವಂತೆ ಮಾಡಿದರು.1986 ರಾಜೀವ್ ಗಾಂಧೀ ರಾಷ್ಟೀಯ ಶಿಕ್ಷಣ ನೀತಿ ಜಾರಿಗೊಳಿಸಿ, ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕೆ ನಾಂದಿ ಹಾಡಿದರು. ಎಲ್ಲಾ ಸರಕಾರಗಳು ದೇಶದ ಶಿಕ್ಷಣ ವ್ಯವಸ್ಥೆ ಬಲ ಪಡಿಸಲು ಕಾರ್ಯನಿರ್ವಹಿಸಿವೆ. ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸದೆ ರಾಷ್ಟ್ರೀಕರಣಗೊಳಿಸಬೇಕು. ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು. ದೇಶದಲ್ಲಿನ ಶಿಕ್ಷಣದ ಗುಣಮಟ್ಟ ಅಭಿವೃದ್ಧಿಯ ಸೂಚಕವಾಗಿದೆ. ಸ್ಥಳಿಯವಾಗಿ ಶಿಕ್ಷಕರು ರಾಜಕಾರಣದಲ್ಲಿ ತೊಡಗಿಕೊಳ್ಳದೆ, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಶಾಲೆಯ ಅಭಿವೃದ್ಧಿ ಮಾಡಬೇಕು. ಕೊವಿಡ್-19 ನಿಂದಾಗಿ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುವವರಿಗೆ ತೊಂದರೆಯಾಗಿದೆ. ಸರಕಾರ ಈ ಕುರಿತು ಗಮನ ಹರಿಸಬೇಕು ಎಂದರು.
ಶಿಕ್ಷಕರ ದಿನಾಚರಣೆ ನಿಮಿತ್ತವಾಗಿ ಮಾಜಿ ರಾಷ್ಟ್ರಪತಿ ರಾಧಾಕೃಷ್ಣ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು. ಶಿಕ್ಷಕ ವೃತ್ತಿಯಿಂದ ನಿವೃತ್ತರಾದವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭಕ್ಕೂ ಮುನ್ನಾ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣವ್ ಮುಖರ್ಜಿ ನಿಧನ ಪ್ರಯುಕ್ತ ಒಂದು ನಿಮಿಷದ ಮೌನಆಚರಣೆ ಮಾಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಕರಿಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ, ಎಮ್.ಎಸ್.ಶಿವಳ್ಳಿ ಮಠ, ಹುಬ್ಬಳ್ಳಿ ಶಹರ ಕರ್ನಾಟಕ ಸಂಘ ನೌಕರ ಸಂಘದ ಅಧ್ಯಕ್ಷ ಪ್ರಲ್ಹಾದ್ ಗೆಜ್ಜಿ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಹೆಚ್.ಜಂಗಳಿ, ಪ್ರೌಢಶಾಲಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಯು.ಬುದ್ದಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಕೆ.ಮಳಗಿ, ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್ ಸೇರಿದಂತೆ ಶಹರದ ಅನೇಕ ಶಿಕ್ಷಕರು, ಶಿಕ್ಷಕಿಯರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English