ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರದಲ್ಲಿ ಮಹಾನಗರ ಪಾಲಿಕೆ ಅಡಿಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದರು.
ನಗರದಲ್ಲಿ ನಡೆಯುತ್ತಿರುವ ವಿವಿದ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಗೋಕುಲ ಕೈಗಾರಿಕಾ ವಸಹಾತು ಪ್ರದೇಶದಲ್ಲಿ 18.5ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆ, 8.5 ಕೋಟಿ ವೆಚ್ಚದಲ್ಲಿ ಉಪರಸ್ತೆಗಳನ್ನು ಕಾಂಕ್ರೀಟ್ ನಿಂದ ನಿರ್ಮಿಸಲಾಗುತ್ತಿದೆ. ಕಾಮಗಾರಿ ಪ್ರಗತಿ ಹಂತದಲ್ಲಿ ಇದ್ದು, ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸಿ ಉದ್ಘಾಟನೆ ಸಿದ್ದಗೊಳಿಸಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿ 7.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಮುಖ್ಯ ಕಟ್ಟಡ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
17.50ಕೋಟಿ ವೆಚ್ಚದಲ್ಲಿ ಇಂದಿರಾ ಗಾಜಿನ ಮನೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಕಾಮಗಾರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿ ದೂರಿ ನೀಡಿದ್ದಾರೆ. ಈ ಕುರಿತು ಇಂದಿರಾ ಗಾಜಿನ ಮನೆಯ ವಿಹಾರಿಗಳ ಸಂಘದೊಂದಿಗೆ ಸ್ಮಾರ್ಟ್ ಸಿಟಿ ಅಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಸಭೆ ನಡೆಸಿ ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಯನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಕೂಡಲೇ ಮೂಲಭೂತ ಸೌಕರ್ಯಗಳಾದ ಶೌಚಾಲಯ,ದೀಪದ ವ್ಯವಸ್ಥೆಯನ್ನು ಉದ್ಯಾನವನದಲ್ಲಿ ಕಲ್ಪಿಸಲಾಗುವುದು.
ಚಿಟಗುಪ್ಪಿ ಆಸ್ಪತ್ರೆಯಲ್ಲಿ 19.50 ಕೋಟಿ ವೆಚ್ಚದ, 100 ಹಾಸಿಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹುಬ್ಬಳ್ಳಿ ಮೀನು ಮಾರುಕಟ್ಟೆಯಲ್ಲಿ ವ್ಯಾಪರಸ್ಥರು ಬೀದಿಯಲ್ಲಿ ಕುಳಿತು ಮೀನಿನ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಅಲ್ಲಿ ವಾಸಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. 5 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಾಣ ಮಾಡಿ, ಬೀದಿ ಬದಿಯ ವ್ಯಾಪಾರಸ್ಥರನ್ನು ಸ್ಥಳಾಂತರಿಸಲಾಗುವುದು. ತೋಳನ ಕೆರೆಯ ಅಭಿವೃದ್ಧಿ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಕೋಳಚೆನೀರು ಶುದ್ಧೀಕರಣ ಘಟಕ ಪೂರ್ಣಗೊಂಡಿದೆ. ಶೀಘ್ರವಾಗಿ ಉದ್ಘಾಟನೆ ಮಾಡಲಾಗುವುದು. ಘಂಟಿಕೇರಿಯ ಸರಕಾರಿ ಮಾದರಿ ಕನ್ನಡ ಶಾಲೆ ಕಟ್ಟಡ ದುರಸ್ತಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಜನತಾ ಬಜಾರ್ ಸ್ಥಳಾಂತರ ಕಾರ್ಯನಡೆದಿದೆ. ಕೇಂದ್ರದಿಂದ ಚೆನ್ನಮ್ಮ ವೃತ್ತದ ಫ್ಲೈ ನಿರ್ಮಾಣಕ್ಕೆ ಕೇಂದ್ರ ಹಸಿರು ನಿಶಾನೆ ತೋರಿದ್ದು ನಗರಾಭಿವೃದ್ಧಿ ಇಲಾಖೆಯಿಂದ ಯೋಜನೆಗೆ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು. ಅಕ್ಟೋಬರ್ 5 ರಂದು ಹಲವು ಕಾಮಗಾರಿಗಳನ್ನು ಕೇಂದ್ರದ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಸಚಿವವಪ್ರಲ್ಹಾದ್ ಜೋಶಿ ಹಾಗೂ ಬೃಹತ್ ಮತ್ತ ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಕೊರೊನಾ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ನಗರದಲ್ಲಿ 34 ಕೋಟಿ ಕರ ಸಂಗ್ರಹವಾಗಿದೆ. 4 ಕೋಟಿ ಕರ ಸಂಗ್ರಹದಲ್ಲಿ ವ್ಯತ್ಯಾಸವಾಗಿದೆ. ರಾಜ್ಯದ ಬಳ್ಳಾರಿ, ಕಲಬುರ್ಗಿ,ವಿಜಯಪುರ ಹಾಗೂ ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳನ್ನು ಸ್ಮಾರ್ಟ್ ಸಿಟಿ ಅಡಿಯಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಸೇರಿದಂತೆ ನಗರಾಭಿವೃದ್ಧಿ ಪ್ರಾಧಿಕಾರದ ಇತರೆ ಸದಸ್ಯರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English