ಮಂಗಳೂರು: ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾದೊಂದಿಗೆ ವಿಲೀನ ಮಾಡದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆದಾಯ ತೆರಿಗೆ ಪ್ರಧಾನ ಆಯುಕ್ತರ (ಆಡಳಿತ) ಕಚೇರಿಯನ್ನು ಗೋವಾದ ಪಣಜಿಯ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯೊಂದಿಗೆ ವಿಲೀನಗೊಳಿಸಲಾಗುತ್ತಿರುವ ವಿಷಯವು ಕರಾವಳಿ ಕರ್ನಾಟಕದ ಉದ್ಯಮಿಗಳಲ್ಲಿ ಹಾಗೂ ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್ ಗಳಲ್ಲಿ ಸಂಪೂರ್ಣ ಅಸಮಾಧಾನವನ್ನುಂಟು ಮಾಡಿದ್ದು, ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ವಿಲೀನ ಮಾಡದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಅವರಿಗೆ ಕಟೀಲ್ ಮನವಿ ಮಾಡಿದ್ದಾರೆ.
ಮಂಗಳೂರು ಕರ್ನಾಟಕ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದ್ದು, ಈ ನಗರವು ರಸ್ತೆ, ವಿಮಾನ, ರೈಲ್ವೆ ಹಾಗೂ ಜಲಸಂಪರ್ಕ ಹೊಂದಿದೆ. ಶೈಕ್ಷಣಿಕ ಕೇಂದ್ರವೆಂದು ಕರೆಯಲ್ಪಡುವ ಶೇಷ್ಠ ಧಾರ್ಮಿಕ ಪರಂಪರೆಯನ್ನು ಹೊಂದಿದ್ದು, ಅನೇಕ ಬ್ಯಾಂಕಿಂಗ್ ಸಂಸ್ಥೆಗಳಿಗೆ ಜನ್ಮ ನೀಡಿದ ಪ್ರದೇಶ. ಇದು ನಮ್ಮ ರಾಜ್ಯಕ್ಕೆ ಮತ್ತು ನಮ್ಮ ದೇಶಕ್ಕೆ ಹೆಮ್ಮೆಯಾಗಿದೆ. ಜಿಲ್ಲೆಯ ನಾಗರಿಕರು ಅತ್ಯಂತ ವಿದ್ಯಾವಂತರೆಂದು ಪರಿಗಣಿಸಲಾಗುತ್ತಿದ್ದು, ತೆರಿಗೆದಾರರ ಪ್ರಾಮಾಣಿಕತೆ, ಸುಮಾರು 4.50 ಲಕ್ಷ ಮತ್ತು ಹೆಚ್ಚಿನ ತೆರಿಗೆ ಪಾವತಿದಾರರು ಮತ್ತು ಸುಮಾರು 2,000 ವೃತ್ತಿಪರರನ್ನು ಹೊಂದಿರುವ ಮಂಗಳೂರಿನ ಆದಾಯ ತೆರಿಗೆ ಕಚೇರಿಯು ತೆರಿಗೆದಾರರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನ ಆಯುಕ್ತರ ಕಚೇರಿಯನ್ನು ಬೇರೆ ರಾಜ್ಯದೊಂದಿಗೆ ವಿಲೀನಗೊಳಿಸುವುದರಿಂದ ಈ ಪ್ರದೇಶದ ನಾಗರಿಕರ ಹಿತಾಸಕ್ತಿಗೆ ಧಕ್ಕೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ.
ಭೌಗೋಳಿಕವಾಗಿ ಮಂಗಳೂರು ಹಾಗೂ ಗೋವಾದ ಪಣಜಿ ನಡುವೆ ಸುಮಾರು 376 ಕಿ.ಮೀ. ಅಂತರವಿದ್ದು, ಪಣಜಿಗೆ ಕೇವಲ ರೈಲು ಅಥವಾ ರಸ್ತೆಯ ಮೂಲಕ ಮಾತ್ರ ಪ್ರಯಾಣಿಸಬಹುದು. ಮಂಗಳೂರಿನಿಂದ ಪಣಜಿಗೆ ನೇರ ವಿಮಾನ ಸೌಲಭ್ಯ ಲಭ್ಯವಿಲ್ಲ. ರೈಲಿನ ಪ್ರಯಾಣವು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಮಂಗಳೂರಿನಿಂದ ಪಣಜಿಗೆ ನೇರ ರೈಲು ವ್ಯವಸ್ಥೆ ಇಲ್ಲ. ತೆರಿಗೆದಾರರು ಮತ್ತು ಅವರ ಅಧಿಕೃತ ಪ್ರತಿನಿಧಿಗಳು ಗೋವಾದ ಮಡ್ಗಾಂವ್‌ನಲ್ಲಿ ಇಳಿದು ನಂತರ 36 ಕಿ.ಮೀ ದೂರ ಬಸ್ ಅಥವಾ ಖಾಸಗಿ ಟ್ಯಾಕ್ಸಿ ಮೂಲಕ ಪಣಜಿಯನ್ನು ತಲುಪಬೇಕು. ಇದು ತೆರಿಗೆ ಪಾವತಿದಾರರಿಗೆ ಮತ್ತು ಅಧಿಕೃತ ಪ್ರತಿನಿಧಿಗಳಿಗೆ ಗೊಂದಲವನ್ನು ಸೃಷ್ಟಿಸುತ್ತದೆ. ಪ್ರಯಾಣಕ್ಕೂ ಸಾಕಷ್ಟು ಸಮಯವನ್ನು ವ್ಯಯಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.ಹಣಕಾಸು ಕಾಯ್ದೆ 2020 ಪ್ರಕಾರ ನೋಂದಣಿ / ಅನುಮೋದನೆಯನ್ನು 5 ವರ್ಷಗಳ ಸೀಮಿತ ಅವಧಿಗೆ ಮಾತ್ರ ನೀಡಲಾಗುವುದು. ಮರು ನೋಂದಣಿಗಾಗಿ ಈ ಸಂಸ್ಥೆಗಳು ಆದಾಯ ತೆರಿಗೆ ಪ್ರಧಾನ ಆಯುಕ್ತರನ್ನು ಸಂಪರ್ಕಿಸಬೇಕು. ಮರು ನೋಂದಣಿಗೆ ಅರ್ಜಿ ಸ್ವೀಕರಿಸಿದ ನಂತರ ಯಾವುದೇ ವಿವರವಾದ ವಿಚಾರಣೆಯಿಲ್ಲದೆ ನೋಂದಣಿ ಆದೇಶವನ್ನು ನೇರವಾಗಿ ರವಾನಿಸಲು ಆದಾಯ ತೆರಿಗೆ ಪ್ರಧಾನ ಆಯುಕ್ತರ ಅನುಮೋದನೆ ಅಗತ್ಯವಿದೆ.
ಕೇಂದ್ರಿಯ ನೇರ ತೆರಿಗೆ ಮಂಡಳಿಯ ನಿರ್ಧಾರದಂತೆ ಕಳೆದ ಎರಡು ದಶಕಗಳಿಗಿಂತ ಹೆಚ್ಚು ಕಾಲ ದಿಂದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ ಪ್ರಧಾನ ಆಯುಕ್ತರ ಕಚೇರಿ ಮಂಗಳೂರಿನಲ್ಲಿದ್ದರೆ ತುಂಬಾ ಅನುಕೂಲವಾಗುತ್ತದೆ. ಪ್ರಧಾನ ಆದಾಯ ತೆರಿಗೆ ಆಯುಕ್ತರ ಕಚೇರಿಯು ಅಗತ್ಯವಾದ ಎಲ್ಲಾ ಮೂಲ ಸೌಕರ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ಕರಾವಳಿ ಪ್ರದೇಶದ ಆರ್ಥಿಕ ವ್ಯವಹಾರಗಳ ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
Click this button or press Ctrl+G to toggle between Kannada and English