ಮಂಗಳೂರು :ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಬಹು ನಿರೀಕ್ಷೆಯ ತುಳುಚಿತ್ರ “ತೆಲಿಕೆದ ಬೊಳ್ಳಿ” ಗುರುವಾರ ತೆರೆಕಂಡಿತು. ಸೆಂಟ್ರಲ್ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣಗೊಂಡ ಈ ಚಿತ್ರದ ಬಿಡುಗಡೆ ಸಮಾರಂಭವು ನಗರದ ಸೆಂಟ್ರಲ್ ಟಾಕೀಸ್ ನಲ್ಲಿ ಗುರುವಾರ ನಡೆಯಿತು. ಸಮಾರಂಭದಲ್ಲಿ ಚಿತ್ರದ ನಿರ್ದೇಶಕ ಪಿ.ಎಚ್. ವಿಶ್ವನಾಥ್, ಛಾಯಾಗ್ರಾಹಕ ಆರ್. ಮಂಜುನಾಥ್, ಚಿತ್ರದ ನಿರ್ಮಾಪಕರಾದ ಸುಧೀರ್ ಕಾಮತ್ ಮತ್ತು ಶರ್ಮಿಳಾ ಡಿ. ಕಾಪಿಕಾಡ್, ತೆಲಿಕೆದ ಬೊಳ್ಳಿ ಚಿತ್ರದ ಪ್ರಮುಖ ನಟ ಹಾಗೂ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದ ದೇವದಾಸ್ ಕಾಪಿಕಾಡ್, ಪ್ರಮುಖ ಕಲಾವಿದರಾದ ನವೀನ್ ಡಿ. ಪಡೀಲ್, ಲಕ್ಷ್ಮಣ್ ಕುಮಾರ್ ಮಲ್ಲೂರ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್, ಡಾ| ನಾ. ದಾಮೋದರ ಶೆಟ್ಟಿ, ಸುಧಾಕರ ತುಂಬೆ ದುಬಾೖ ಕರ್ನೂರು ಮೋಹನ್ ರೈ, ಪ್ರಕಾಶ್ ಪಾಂಡೇಶ್ವರ, ಸಂತೊಷ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರಿನ ಸೆಂಟ್ರಲ್, ಜ್ಯೋತಿ ಹಾಗೂ ಬಿಗ್ ಸಿನಿಮಾಸ್, ಉಡುಪಿಯ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಮೂಡಬಿದ್ರೆಯಲ್ಲಿ ಅಮರಶ್ರೀ ಚಿತ್ರ ಮಂದಿರಗಳಲ್ಲಿ ತೆಲಿಕೆದ ಬೊಳ್ಳಿ ಏಕಕಾಲದಲ್ಲಿ ಗುರುವಾರ ಮೊದಲ ಭರ್ಜರಿ ಪ್ರದರ್ಶನವನ್ನು ಕಂಡಿತು. ಮೊದಲ ಬಾರಿಗೆ ದೇವದಾಸ್ ಕಾಪಿಕಾಡ್ ಅವರ ಪುತ್ರ ಅರ್ಜುನ್ ಕಾಪಿಕಾಡ್ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದು, ಉತ್ತಮ ಅಭಿನಯದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ಆಶ್ರಿತ ಶೆಟ್ಟಿ ಅಭಿನಯವೂ ಗ್ರಾಮೀಣ ಭಾಗದ ತರುಣಿಯೊಬ್ಬಳ ನಿಜ ಸತ್ವವನ್ನು ಪ್ರತಿಬಿಂಬಿಸಿದಂತಿದೆ. ಎಂ. ಗೋಪಿನಾಥ್ ಭಟ್ ಅವರ ಖಳಪಾತ್ರ ಹಾಗು ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್ ಕಾಮಿಡಿ ಜುಗಲ್‌ಬಂದಿ ಅದ್ಬುತವಾಗಿ ಮೂಡಿಬಂದಿದೆ.
ತ್ರಿಕೋನ ಪ್ರೇಮ ಕಥೆಯನ್ನು ಒಳಗೊಂಡ ಚಿತ್ರಕ್ಕೆ ಹಾಸ್ಯದ ಲೇಪದೊಂದಿಗೆ ಹೊಸ ಗೆಟಪ್ ನೀಡಲಾಗಿದೆ. ತುಳುವಿನ ಸೂಪರ್‌ಸ್ಟಾರ್‌ಗಳ ಜತೆಗೆ ತುಳು ಚಿತ್ರರಂಗದ 45ನೇ ಚಿತ್ರ ಎಂಬ ಹೆಗ್ಗಳಿಕೆಯನ್ನು ಈ ಚಿತ್ರ ಪಡೆದಿದೆ.
Click this button or press Ctrl+G to toggle between Kannada and English