ಗಂಗೊಳ್ಳಿ : ಗಂಗೊಳ್ಳಿಯ ಮಹಾಮ್ಮಾಯಿ ಮಹಾಸತಿ ದೇವಸ್ಥಾನದಲ್ಲಿ ಗುರುವಾರ ಮಧ್ಯಾಹ್ನ ಯುವಕನೋರ್ವ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಯುವಕ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ದೇವರು ಮೈಮೇಲೆ ಬರುತ್ತಿದ್ದರೂ ಸಮುದಾಯದ ದೇವಸ್ಥಾನದಲ್ಲಿ ಪಾತ್ರಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ರಾಘವೇಂದ್ರ ಖಾರ್ವಿ, ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ರಾಘವೇಂದ್ರ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು.
ಗಂಗೊಳ್ಳಿ ದಾಕುಹಿತ್ಲು ನಿವಾಸಿ ರಾಘವೇಂದ್ರ ಖಾರ್ವಿ (35) ಮೃತರು ಎಂದು ಗುರುತಿಸಲಾಗಿದೆ. ಈ ಸಂದರ್ಭ ರಕ್ಷಿಸಲು ಹೋಗಿ ಗಾಯಗೊಂಡವರನ್ನು ಗಂಗೊಳ್ಳಿಯ ಲಕ್ಷ್ಮಣ ಖಾರ್ವಿ ಹಾಗೂ ಜನಾರ್ದನ ಖಾರ್ವಿ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾರ್ವಿಕೇರಿಯ ಶ್ರೀಮಹಾಕಾಳಿ ದೇವಳದ ಹಿಂಬದಿಯಲ್ಲಿರುವ ಈ ದೇವಸ್ಥಾನದಲ್ಲಿ ಮಹಾಲಯ ಅಮಾವಾಸೆ ಪ್ರಯುಕ್ತ ವಿಶೇಷ ಪೂಜೆ ನಡೆಯುತಿತ್ತು. ಈ ವೇಳೆ ಏಕಾಏಕಿ ಪೆಟ್ರೋಲ್ ಕ್ಯಾನ್ ಹಿಡಿದುಕೊಂಡು ದೇವಸ್ಥಾನದೊಳಗೆ ಬಂದ ರಾಘವೇಂದ್ರ ಖಾರ್ವಿ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡರು. ಈ ವೇಳೆ ದೇವಳದಲ್ಲಿ ಉರಿಸಿಟ್ಟ ಕಾಲುದೀಪದ ಬೆಂಕಿ ಇವರಿಗೆ ತಗಲಿತು ಎನ್ನಲಾಗಿದೆ. ಕೂಡಲೇ ಅಲ್ಲೇ ಇದ್ದ ಕೆಲವರು ಬೆಂಕಿ ನಂದಿಸಿ ಅವರನ್ನು ಕಾಪಾಡಲು ಪ್ರಯತ್ನಿಸಿದರು. ಆಗ ಬೆಂಕಿ ತಗುಲಿ ಲಕ್ಷ್ಮಣ ಮತ್ತು ಜನಾರ್ದನ ಸುಟ್ಟ ಗಾಯಗೊಂಡರು ಎಂದು ತಿಳಿದುಬಂದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English