ಕಾಸರಗೋಡು : ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಹಾಗೂ ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ನಡೆಸಿದ ಪ್ರತಿಭಟನಾ ಜಾಥಾ ಹಿಂಸೆಗೆ ತಿರುಗಿತು.
ವಿದ್ಯಾನಗರ ಬಿ.ಸಿ. ರೋಡ್ ನಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಗೇಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ದೂಡಿ ಹಾಕಿ ಮುನ್ನುಗ್ಗಲು ಯತ್ನಿಸಿದ್ದು, ಕೆಲ ಕಾರ್ಯಕರ್ತರು ಬ್ಯಾರಿಕೇಡ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಜಲಫಿರಂಗಿ ಪ್ರಯೋಗಿಸಿದರು. ಇದರಿಂದ ಓರ್ವ ಕಾರ್ಯಕರ್ತೆ ಅಂಜು ಜೋಸ್ ಗಾಯಗೊಂಡರು.
ಪ್ರತಿಭಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು. ಅಂಜು ಜೋಸ್ ಪಿ. ಸುಧಾಮ ಗೋಸಾಡ, ಎನ್.ಸತೀಶ್, ಪಿ.ಆರ್. ಸುನಿಲ್, ವಿಜಯಕುಮಾರ್ ರೈ, ರಕ್ಷಿತ್ ಬದಿಯಡ್ಕ, ಅಜಿತ್, ಸಾಗರ್ ಮೊದಲಾದವರು ನೇತೃತ್ವ ನೀಡಿದರು.
Click this button or press Ctrl+G to toggle between Kannada and English