ಉಡುಪಿ: ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಸ್ವರ್ಣ ನದಿಯು ಉಕ್ಕಿ ಹರಿಯುತ್ತಿದ್ದು, ಉಪ್ಪೂರು, ಬೈಕಾಡಿ, ತೋನ್ಸೆ, ನಯಂಪಳ್ಳಿ ಹಾಗೂ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.
ಶನಿವಾರ ಸಂಜೆ ಆರಂಭವಾದ ಮಳೆ ಬಿರುಸುಗೊಂಡಿತ್ತು. ರಾತ್ರಿ ಮೂರು ಘಂಟೆ ಸುಮಾರಿಗೆ ಸ್ವರ್ಣ ನದಿಯಲ್ಲಿ ಪ್ರವಾಹ ಅಧಿಕವಾಗಿದ್ದು, ಇಂದು ಬೆಳಿಗ್ಗೆಯೂ ಮುಂದುವರಿದ ಕಾರಣ ಅನಿರೀಕ್ಷಿತ ಪರಿಸ್ಥಿತಿ ಸಂಭವಿಸಿದೆ.
ಉಪ್ಪೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ತಮ್ಮನ್ನು ರಕ್ಷಿಸಲು ದೋಣಿ ಕಳುಹಿಸುವಂತೆ ಕೇಳಿಕೊಂಡರೂ ಯಾರೂ ಬಂದಿಲ್ಲ
ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಅಲೆವೂರಿನ ಬಳಿಯ ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ಮನೆಯಲ್ಲಿ ವಾಸವಿದ್ದ ಕುಟುಂಬಗಳು ಜಿಲ್ಲಾಡಳಿತವನ್ನು ಸಹಾಯಕ್ಕಾಗಿ ಮನವಿ ಮಾಡಿವೆ.
ನಗರದ ಮುಖ್ಯ ರಸ್ತೆಗಳು ನೀರಿನಲ್ಲಿ ಮುಳುಗಿದ್ದು ನೀರು ತುಂಬಿರುವ ಕಾರಣದಿಂದಾಗಿ ನಗರದ ಪ್ರಮುಖ ಬೀದಿಗಳಲ್ಲಿನ ಸಂಚಾರವನ್ನು ಕಡಿತಗೊಳಿಸಲಾಗಿದೆ.
ಪುತ್ತಿಗೆ ಮಠ, ಗುಂಡಿಬೈಲ್ – ಕಲ್ಸಂಕ ರಸ್ತೆ, ಬೈಲ್ಕೆರೆ ಮಠದ ಬೆಟ್ಟು, ಉಡುಪಿ-ಮಣಿಪಾಲ ಮುಖ್ಯ ರಸ್ತೆ ಜಲಾವೃತವಾಗಿದೆ.
ಬಡಗುಪೇಟೆಯ ಅನೇಕ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದ್ದು, ಬೈಲಕೆರೆ, ಕುಂಜಿಬೆಟ್ಟು ಮತ್ತು ಆದಿ ಉಡುಪಿ ಪ್ರದೇಶವೂ ಮುಳುಗಿದೆ. ಉಡುಪಿ ಶ್ರೀಕೃಷ್ಣ ಮಠದ ಸನಿಹದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವು ನೀರಿನಲ್ಲಿ ಮುಳುಗಿದೆ. ಕಲ್ಸಂಕ ಬಳಿಯ ಇಂದ್ರಾಣಿ ನದಿಯ ದಡದಲ್ಲಿರುವ ಪ್ರದೇಶಗಳು ಪ್ರವಾಹದಲ್ಲಿ ಸಿಲುಕಿವೆ.
ಬೈಲಕೆರೆ ಪ್ರದೇಶದ ನೀರಿನ ಮಟ್ಟ ಗಣನೀಯವಾಗಿ ಏರಿದ್ದು ಅನೇಕ ಮನೆಗಳಿಗೆ ನೀರು ನುಗ್ಗಿದೆ. ಅನೇಕ ಮನೆಗಳ ಕಾಂಪೌಂಡ್‌ನಲ್ಲಿ ನಿಲ್ಲಿಸಲಾಗಿರುವ ವಾಹನಗಳು ನೀರಿನಲ್ಲಿ ಮುಳುಗಿದೆ.
ಮಲ್ಪೆಯಲ್ಲಿ 3 ಬೋಟ್ ಮುಳುಗಡೆಯಾಗಿದ್ದು ಲಕ್ಷಾಂತರ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬೋಟ್‌ಗಳು ಮುಳುಗಡೆಯಾದ ಸಂದರ್ಭ ಮೀನುಗಾರರು ಕಲ್ಲು ಬಂಡೆ ಮೇಲೆ ಆಶ್ರಯ ಪಡೆದು ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಪರಿಸ್ಥಿತಿಯನ್ನು ಎದುರಿಸಲು ಮಂಗಳೂರಿನಿಂದ ಉಡುಪಿಗೆ ಎನ್‌ಡಿಆರ್‌ಎಫ್ ಪಡೆ ಕಳುಹಿಸುವಂತೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದ್ದಾರೆ. ವಿಶೇಷ ಸಲಕರಣೆಗಳೊಂದಿಗೆ ಎನ್‌ಡಿಆರ್‌ಎಫ್ ತಂಡವು ಪ್ರವಾಹದಲ್ಲಿ ಸಿಲುಕಿದ ಕುಕ್ಕೇಹಳ್ಳಿ ಮತ್ತು ಇತರ ಸ್ಥಳಗಳಿಗೆ ತಲುಪಿದೆ.
ಕಾರ್ಕಳದಲ್ಲಿ ಎಣ್ಣೆಹೊಳೆ, ಹೆರ್ಮುಂಡೆ ಪ್ರದೇಶದ ಹಲವಾರು ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ರಾಜ್ಯ ಹೆದ್ದಾರಿ ಕಾರ್ಕಳ – ಅಜೆಕಾರು ರಸ್ತೆ ಸಂಪರ್ಕ ಕಡಿತಗೊಂಡಿದ್ದು ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Click this button or press Ctrl+G to toggle between Kannada and English