ಶುದ್ಧೀಕರಿಸದೇ ನಗರಕ್ಕೆ ನೀರನ್ನು ಪೂರೈಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ ಆಯುಕ್ತರು

9:54 PM, Tuesday, September 22nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Palike sabheಮಂಗಳೂರು:  ಚರ್ಚೆ ಗದ್ದಲಗಳ ನಡುವೆ ಮಂಗಳೂರು ಮಹಾ ನಗರ ಪಾಲಿಕೆ ಸಾಮಾನ್ಯ ಸಭೆ  ಇಂದು ಮೇಯರ್ ದಿವಾಕರ್ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಡಿವ ನೀರು ಸಂಸ್ಕರಣಾ ಘಟಕದ ನೀರಿನ ಗುಣಮಟ್ಟ 36.4 ಇದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ  ನೀರಿಗೆ ಅಗತ್ಯ ರಾಸಾಯನಿಕ ಬಳಸಿ ಶುದ್ಧೀಕರಿಸದೇ ನೀರನ್ನು ಪೂರೈಸಿರುವ ಕಾರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಸ್ತಾಪಿಸಿದರು.

ಈ ಬಗ್ಗೆ ಹಿರಿಯ ಆರೋಗ್ಯಾಧಿಕಾರಿಗಳು ಈ ನೀರು ಸೇವನೆಯಿಂದ ಜನರ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಆದರೂ ಶುದ್ಧೀಕರಿಸದೇ ನೀರನ್ನು ಪೂರೈಕೆ ಮಾಡಿರುವ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ನೀರಿನ ಮೀಟರ್‌ ದರವನ್ನು ಹೆಚ್ಚು ಮಾಡಿರೋದನ್ನು ಮತ್ತೆ ಕಡಿಮೆ ಮಾಡಲು ಅಧಿಕಾರಿಗಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಮನಪಾ ಸದಸ್ಯ ಅನಿಲ್ ಡಿಸೋಜ ಪ್ರಶ್ನಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ನೀರಿನ ಅದಾಲತ್ ಮಾಡಿ ಈ ಸಮಸ್ಯೆ ಶೀಘ್ರ ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿದರು. ಮಂಗಳೂರು ಮನಪಾ ಹಿಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಬಗ್ಗೆ ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ನೆನಪಿಸಿದರು, ಈ ಸಂದರ್ಭದಲ್ಲಿ ಉತ್ತರಿಸಿದ ಅವರು, ಈ ಬಗ್ಗೆ ಅಧಿಕಾರಿಗಳು ಉತ್ತರ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮನಪಾ ಸದಸ್ಯ ಎ.ಸಿ.ವಿನಯ್ ರಾಜ್ ಮನಪಾದಲ್ಲಿ ಹಣ ಇಲ್ಲದಿದ್ದರೂ, ಹೊಸತಾಗಿ ಮತ್ತೆ 25 ಲಕ್ಷ ರೂ. ಅನುದಾನ ನೀಡಿರುವ ಬಗ್ಗೆ  ಆಕ್ಷೇಪ ಎತ್ತಿದರು. ಈ ಬಗ್ಗೆ ಮನಪಾ ಬಿಜೆಪಿ ಸದಸ್ಯ ಸುಧೀರ್ ಶೆಟ್ಟಿ ಹಾಗೂ ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ತೀವ್ರ ವಾಗ್ದಾಳಿ ನಡೆಸಿದರು. ಸಭೆಯಲ್ಲಿ ಇದರಿಂದ ಸಾಕಷ್ಟು ಹೊತ್ತು ಗದ್ದಲ ಸೃಷ್ಟಿಯಾಯಿತು‌.

ಮನಪಾ ಸದಸ್ಯ ಅನಿಲ್ ಮಂಗಳೂರು ಮನಪಾ ವ್ಯಾಪ್ತಿಯ ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗಾಗಿ ಮೀಸಲಿಟ್ಟ ಜಾಗದಲ್ಲಿ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪ್ರಸ್ತಾಪಿಸಿದರು. ಈ ಬಗ್ಗೆ ಅಲ್ಲಿನ ಕಾರ್ಪೊರೇಟರ್ ಸಂಗೀತಾ ನಾಯಕ್ ಮಾತನಾಡಿ, ಈ ಹಿಂದಿನ ಕಾರ್ಪೊರೇಟರ್ ಅಲ್ಲಿ ಅಕ್ರಮವಾಗಿ 25 ಕ್ಕೂ ಹೆಚ್ಚು ಮನೆ ನಿರ್ಮಿಸಿ, ಮಾರ್ಗವನ್ನು ಮಾಡಿ, ಮನೆ ನಂಬರನ್ನೂ ನೀಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಗದ್ದಲವೇರ್ಪಟ್ಟಿತು.

ಈಗಾಗಲೇ ಅಲ್ಲಿ ನಡೆಯುತ್ತಿರುವ ಕಾಮಗಾರಿ ನಿಲ್ಲಿಸಲಾಗಿದೆ‌ ಎಂದು ಮೇಯರ್ ಸ್ಪಷ್ಟನೆ ಕೊಟ್ಟರು. ಆದರೆ, ಜಿಲ್ಲಾಧಿಕಾರಿ ಈ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು ಕೆಡವಿ ಹಾಕಲು ಸೂಚನೆ ನೀಡಿದ್ದಾರೆಂದು ಮನಪಾ ಸದಸ್ಯರು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್, ಎಲ್ಲರ ಅಕ್ರಮ ಕಟ್ಟಡಗಳನ್ನು ಕೆಡವಿ ಹಾಕಲಾಗುತ್ತದೆ ಎಂದು ಹೇಳಿದರು.‌ ತಕ್ಷಣ ಪ್ರತಿಕ್ರಿಯಿಸಿದ ವಿಪಕ್ಷದ ನಾಯಕ ಅಬ್ದುಲ್ ರವೂಫ್ , ಇದರಲ್ಲಿ ರಾಜಕೀಯ ಬೇಡ, ಯಾರೆಲ್ಲಾ ಇಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ್ದಾರೋ ಅದನ್ನು ಕೆಡವಿ ಹಾಕಿ ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಅಂಬೇಡ್ಕರ್ ವೃತ್ತದಿಂದ ಲೈಟ್ ಹೌಸ್ ಹಿಲ್ ರೋಡ್ ನ ಕೆಥೊಲಿಕ್ ಕ್ಲಬ್ ವರೆಗಿನ ರಸ್ತೆಗೆ ಮುಲ್ಕಿ ಸುಂದರರಾಮ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಎಂದು ಸರಕಾರ ಆದೇಶಿಸಿದೆ ಎಂದು ಮೇಯರ್ ದಿವಾಕರ ಪಾಂಡೇಶ್ವರ ಆದೇಶಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English