ಬಯಲ ಆಲಯದ ಗಣಪ ಎಂದೇ ಪ್ರಸಿದ್ದಿ ಪಡೆದಿರುವ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಸೌತಡ್ಕ ಶ್ರೀ ಮಹಾಗಣಪತಿ.
ವಿಶಾಲ ಮೈದಾನದಲ್ಲಿ ಮಡಿ ಮೈಲಿಗೆ ಮುಂತಾದ ಯಾವುದೇ ಭವ ಬಂದನಗಳಿಂದ ಮುಕ್ತವಾಗಿ ಭಕ್ತರಿಗೆ ಇಲ್ಲಿ ಸರ್ವಕಾಲದಲ್ಲೂ ದರ್ಶನ ನೀಡುತ್ತಿದ್ದಾನೆ. ಸೌತೆಕಾಯಿಗಳಿಂದ ಪೂ ಜಿಸಲ್ಪಡುವುದರಿಂದ ದೇವನ ತಾಣ ಸೌತಡ್ಕ ಎಂಬ ಹೆಸರು ಹೊಂದುವಂತಾಯಿತು.
ಇಲ್ಲಿನ ಮುಖ್ಯ ದೇವರು ಎಂದರೆ ಗಣಪತಿ. ಹಾಗೆಯೇ ಗಣಪತಿಯ ಕಪ್ಪು ಶಿಲೆಯ ಮೂರ್ತಿಯ ಪಕ್ಕದಲ್ಲೇ ಸಿದ್ಧಿ ಬುದ್ಧಿಯ ಮೂರ್ತಿಗಳೂ ಇವೆ.ಇಲ್ಲಿ ಬರುವ ಭಕ್ತಾದಿಗಳು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಒಂದು ಘಂಟೆಯನ್ನು ಕಟ್ಟುತ್ತಾರೆ.
ಇಲ್ಲಿನ ಆರಾಧ್ಯ ದೇವರಾದ ಗಣಪನಿಗೆ ಗರ್ಭಗುಡಿ, ದೇವಸ್ಥಾನವಿಲ್ಲದೆ ವಿಶಾಲವಾದ ಹಚ್ಚ ಹಸುರಿನ ವಿಶಾಲವಾದ ಮೈದಾವನವನ್ನೆ ತನ್ನ ಕ್ಷೇತ್ರವಾಗಿರಿಸಿದ್ದಾನೆ.ಈ ಕ್ಷೇತ್ರವು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಸುಮಾರು 35 ಕಿ.ಮೀ, ಧರ್ಮಸ್ಥಳದಿಂದ ಸುಮಾರು 16 ಕಿ.ಮೀ, ಕಪಿಲ ನದಿ ತೀರದಲ್ಲಿರುವ ಪಟ್ರಮೆಯಿಂದ 6 ಕಿ.ಮೀ ದೂರದಲ್ಲಿರುವುದು.
ಸುಮಾರು 8೦೦ ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದಲ್ಲಿ ರಾಜವಂಶಕ್ಕೊಳಪಟ್ಟ ದೇವಾಲಯವು ಸಂಗ್ರಾಮವೊಂದರಲ್ಲಿ ಅರೆಸೊತ್ತಿಗೆ ನಾಶವಾಗಿ ದೇವಾಲಯ ಧ್ವಂಸವಾಗಿತ್ತು. ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದ್ದ ಈ ಗಣಪತಿ ವಿಗ್ರಹವು ದನಗಳನ್ನು ಕಾಯುತ್ತಿದ್ದ ಗೋಪಾಲ ಬಾಲಕರಿಗೆ ಗೋಚರವಾಯ್ತು.
ಈ ಬಾಲಕರೆಲ್ಲರೂ ಸೇರಿಕೊಂಡು ಗಣಪತಿ ವಿಗ್ರಹವನ್ನು ಎತ್ತಿಕೊಂಡು ದಾರಿಯುದ್ದಕ್ಕೂ ಭಜನೆ ಪೂಜೆಗಳನ್ನು ಮಾಡುತ್ತಾ ಈಗ ಇರುವ ಮರದ ಬುಡದಲ್ಲಿ ಕಾಟುಕಲ್ಲುಗಳ ಕಟ್ಟೆ ಇಟ್ಟು ತಾವು ಬೆಳೆಯುತ್ತಿರುವ ಸೌತೆ ಮಿಡಿಗಳನ್ನು ಪ್ರತಿ ದಿನ ನೈವೇದ್ಯವನ್ನಾಗಿ ಅರ್ಪಿಸಿ ಭಜನೆ ಪ್ಪೂಜೆಗಳನ್ನು ಮಾಡತೊಡಗಿದರು.
ಅಂದಿನಿಂದ ಈ ಕ್ಷೇತ್ರಕ್ಕೆ ಸೌತಡ್ಕ ಎಂದು ಹೆಸರು ಬಂತು. (ಸೌತೆ + ಅಡ್ಕ : ಅಡ್ಕ ಎಂದರೆ ಬಯಲು ಎಂದರ್ಥ)
ದೇವಾಸ್ಥಾನಗಳು ವಾಸ್ತು ಶಿಲ್ಪಕ್ಕನುಗುಣವಾಗಿ ಗೋಪುರ ಗರ್ಭ ಗುಡಿಗಳನ್ನು ರಚಿಸಿ ಪೂರ್ವಾಭಿಮುಖವಾಗಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಪೂರ್ವ ಸಂಪ್ರದಾಯ ನಿಯಮವಿದ್ದು,
ಸೌತಡ್ಕ ಗಣಪನು ಈ ಎಲ್ಲಾ ಸಂಪ್ರಾದಯಗಳನ್ನು ತಿರಸ್ಕರಿಸಿ, ಪ್ರಕೃತಿ ಸಂದರ ತಾಣದಲ್ಲಿ ಅಗ್ನೇಯ ಮುಖವಾಗಿ, ಬಯಲೇ ಆಲಯಾವಾಗಿರಿಸಿಕೊಂಡು ಬಡವ ಶ್ರೀಮಂತರೆಂಬ ತಾರತಮ್ಯವಿಲ್ಲದೆ, ಜಾತಿ, ಮತ ಬೇಧವೆಣಿಸದೆ ಮಾನವರಿಗೂ, ಸಕಲ ಜೀವ ರಾಶಿಗಳಿಗೂ ಅಭಯ ಹಸ್ತನಾಗಿ ಹಗಲು ರಾತ್ರಿ ಅನುಗ್ರಹಿಸುತ್ತಾ ರಕ್ಷಿಸಿಕೊಂಡು ಬರುತ್ತಿರುವುದು ಸೌತಡ್ಕ ಮಹತ್ವ ಮೂಡಿಸುವ ವಿಶಿಷ್ಟ ಸಂಪ್ರದಾಯವಾಗಿರುತ್ತದೆ.
ಹಿಂದೆ ಈ ಪರಿಸರದ ಶ್ರೀಮಂತ ಬ್ರಾಹ್ಮಣ ಭಕ್ತರೊಬ್ಬರು ಗಣೇಶನಿಗೆ ದೇವಸ್ಥಾನ ನಿರ್ಮಿಸಲು ತೀರ್ಮಾನಿಸಿ ಕೆಲಸ ಪ್ರಾರಂಭ ಮಾಡುವಷ್ಟರಲ್ಲಿ ಗಣಪತಿಯು ದನ ಕಾಯುವ ಹುಡುಗನ ರೂಪದಲ್ಲಿ ಆ ಬ್ರಾಹ್ಮಣನಿಗೆ ಕನಸಿನಲ್ಲಿ ಕಾಣಿಸಿಕೊಂಡು ದೇಗುಲ ನಿರ್ಮಿಸುವುದಾದರೆ ಅದರ ಗೋಪುರವು ರಾತ್ರಿ ಬೆಳಗಾಗುವುದರೊಳಗೆ ತಂದೆಯಾದ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿರಬೇಕೆಂದು ಕಟ್ಟಾಜ್ಞೆ ನೀಡಿರುವುದರಿಂದ ಆ ಬ್ರಾಹ್ಮಣನಿಗೆ ಆ ಸವಾಲನ್ನು ಎದುರಿಸಲು ತೀರ ಅಸಾಧ್ಯವೆಂದು ಮನಗಂಡು ದೇಗುಲ ನಿರ್ಮಾಣದ ಯೋಜನೆಯನ್ನು ಕೈ ಬಿಡಲಾಯಿತು.
ಕೆಲವು ಸಮಯಗಳ ಹಿಂದೆ ಭಕ್ತಾದಿಗಳೆಲ್ಲರೂ ಸೇರಿ ಜ್ಯೋತಿಷ್ಯರನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯಲ್ಲಿ ಗುಡಿಕಟ್ಟುವ ಬಗ್ಗೆ ವಿಮರ್ಶಿಸಿದಾಗ, ಗುಡಿ ಗೋಪುರ ಕಟ್ಟುವುದು ದೇವರಿಗೆ ಮನಸಿಲ್ಲವೆಂದು ಯಾವುದೇ ರೀತಿಯ ಬಂಧನಕ್ಕೆ ಅವಕಾಶ ನೀಡದೇ ಸಕಲ ಜೀವರಾಶಿಗಳಿಗೂ ಸ್ವ-ಇಚ್ಛೆಯಂತೆ ಮುಕ್ತ ಪ್ರವೇಶಕ್ಕೆ ಅವಕಾಶ ಕಾದಿರಿಸಿಕೊಂಡು ಬರತಕ್ಕದೆಂದು ತಿಳಿದು ಬಂದಿರುವುದರಿಂದ ಗುಡಿಕಟ್ಟುವ ಆಲೋಚನೆಯನ್ನು ಅಲ್ಲಿಗೆ ಕೈ ಬಿಡಲಾಯಿತು.
ಹಾಗಾಗಿ ಭಕ್ತರು ಹಾಗು ತನ್ನ ನಡುವೆ ಯಾವುದೇ ಗೋಡೆ, ಬಾಗಿಲುಗಳ ಅಡ್ಡಿ ಇರಬಾರದೆಂದು ಗಣೇಶನ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ.
ಗಣೇಶನು ಯಾವುದೇ ಆಡಂಬರಗಳನ್ನು ಸ್ವೀಕರಿಸುವುದಿಲ್ಲ,
ಪ್ರಕೃತಿಯ ಮಡಿಲಲ್ಲಿ ಬೆಳೆದು ನಿಂತಿರುವ ಗಿಡ ಮರಗಳ ನೆರಳೇ ಆಸರೆ, ತಂಪಾದ ವನ ಸಿರಿಯ ಮಧ್ಯೆ ಚಿಲಿಪಿಲಿಗುಟ್ಟುವ ಪಕ್ಷಿಗಳ ಹಾಡು, ಗಾನ ಕೋಗಿಲೆಯ ನಾದ ಸ್ವರ, ಹಚ್ಚ ಹಸುರಿನ ಎಲೆಗಳ ಮೇಲೆ ಸೂರ್ಯ ಕಿರಣಕ್ಕೆ ಚಿನ್ನದ ಮೊಗ್ಗೆಯಂತೆ ಮಿನುಗುವ ಇಬ್ಬನಿಯ ತುಣುಕುಗಳು, ಸುತ್ತಲಿನ ಬಯಲಿನಲ್ಲಿ ಸಂತಸದಿ ಕುಣಿದಾಡುತ್ತಿರುವ ಗೋವುಗಳು, ಹೀಗೆ ಹತ್ತು ಹಲವು ಪ್ರಕೃತಿ ಸೌಂದರ್ಯ ರಾಶಿಗಳ ಮಧ್ಯೆ ಗೋಪಾಲ ಬಾಲಕರು ನೈವೇಧ್ಯವಾಗಿ ತಂದೊಪ್ಪಿಸುವ ಸೌತೆ ಮಿಡಿಗಳನ್ನು ಸ್ವೀಕರಿಸುತ್ತಾ ಸಂತಸದಿಂದ ನೆಲೆಯಾಗಿರುವ
ಗಣೇಶನು ಸೌತಡ್ಕ ಪುಣ್ಯ ಕ್ಷೇತ್ರದಲ್ಲಿ ಹೊರತು ಬೇರೆಲ್ಲಿಯೂ ಕಾಣಸಿಗಲಾರದು.ಈ ಕ್ಷೇತ್ರದಲ್ಲಿ ಭಕ್ತರಿಗೆ ಮಧ್ಯಾಹ್ನದ ಊಟವನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು.
ಬೆಳಿಗ್ಗೆ:
ಪ್ರತಿದಿನ ಬೆಳಿಗ್ಗೆ ಅಭಿಷೇಕ ಮಾಡಿ, ಹಣ್ಣು ಕಾಯಿ, ಅವಲಕ್ಕಿ ಪಂಚಕಜ್ಜಾಯ ಸಮರ್ಪಣೆ ಮಾಡಿ 07:15 ಕ್ಕೆ ಬೆಳಗ್ಗಿನ ಪೂಜೆಯನ್ನು ಮಾಡುವುದು.
ಮದ್ಯಾಹ್ನ :
ಮದ್ಯಾಹ್ನ ಒಂದು ಸೇರು ಬೆಳ್ತಿಗೆ ಅಕ್ಕಿಯ ನೈವೇಧ್ಯ, ಹಣ್ಣು ಕಾಯಿ, ತಾಂಬೂಲಾದಿಗಳನ್ನು ಸಮರ್ಪಣೆ ಮಾಡಿ ಮದ್ಯಾಹ್ನ ಗಂಟೆ 12:15 ಕ್ಕೆ ಸರಿಯಾಗಿ ಮಹಾಪೂಜೆಯನ್ನು ಮಾಡುವುದು.
ರಾತ್ರಿ:
ರಾತ್ರಿ 07:15 ಕ್ಕೆ ಹಣ್ಣು ಕಾಯಿ, ಪಂಚಕಜ್ಜಾಯ ನೈವೇಧ್ಯವಾಗಿ ಮಹಾಪೂಜೆ ಜರುಗುವುದು.
ಲೇಖನ : ಶಂಭು
Click this button or press Ctrl+G to toggle between Kannada and English