ಮಂಗಳೂರು : ಮುಲ್ಕಿ ಸುಂದರ ರಾಮ ಶೆಟ್ಟರ ಹೆಸರನ್ನು ಯಾವುದೇ ರಸ್ತೆಗೆ ಇಡಬಹುದಿತ್ತು. 140 ವರ್ಷಗಳ ಇತಿಹಾಸವಿರುವ ಸಂತ ಅಲೋಶಿಯಸ್ ರಸ್ತೆಯೆಂದು ಇರುವ ರಸ್ತೆಗೆ ದ.ಕ.ಜಿಲ್ಲಾಡಳಿತ ಮುಲ್ಕಿ ಸುಂದರ ರಾಮ ಶೆಟ್ಟಿ ಎಂದು ನಾಮಕರಣ ಮಾಡಿರುವುದರ ಹಿಂದೆ ಯಾವ ಉದ್ದೇಶ ಇದೆ ಎಂದು ತಿಳಿಸಬೇಕು ಎಂದು ಅಲೋಶಿಯಸ್ ಶಿಕ್ಷಣ ಸಂಸ್ಥೆಯ ರೆಕ್ಟರ್ ರೆ.ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಒತ್ತಾಯಿಸಿದ್ದಾರೆ.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಸೇವೆಯನ್ನು ನಿರ್ನಾಮಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಸೆ. 5ರಂದು ಈ ರಸ್ತೆಗೆ ನಾಮಕರಣ ಮಾಡಲು ಆದೇಶ ನೀಡಿದ್ದರೂ, ಇಷ್ಟರವರೆಗೆ ಕಳ್ಳರಂತೆ ಬಹಿರಂಗಗೊಳಿಸದ ಜಿಲ್ಲಾಡಳಿತ, ನಿನ್ನೆ ಘೋಷಣೆ ಮಾಡಿ, ಇಂದು ಏಕಾಏಕಿ ರಸ್ತೆಗೆ ನಾಮಕರಣ ಮಾಡಿರೋದು ಸರಿಯಲ್ಲ ಎಂದು ಹೇಳಿದರು.
ರಸ್ತೆಗೆ ಹೆಸರಿಡುವಾಗ ಎಲ್ಲರ ಸಮ್ಮತಿ ಪಡೆದು ನಾಮಕರಣ ಮಾಡಬೇಕೆಂದು ಕೋರ್ಟ್ ಆದೇಶವಿದ್ದರೂ, ಮಹಾನಗರ ಪಾಲಿಕೆಯ ಸಭೆಯಲ್ಲಿ ಘೋಷಿಸಿ ಮರುದಿನ ನಾಮಕರಣ ಮಾಡಿರೋದು ಹೇಡಿಗಳ ಕೃತ್ಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಾ ಬ್ಯಾಂಕ್ನ ಸುಧಾರಣಾ ಹರಿಕಾರರಾಗಿದ್ದ ಮುಲ್ಕಿ ಸುಂದರ ರಾಮ ಶೆಟ್ಟಿಯವರ ಬಗ್ಗೆ ನಮಗೂ ಗೌರವವಿದೆ. ಆದರೆ ಸಂತ ಅಲೋಶಿಯಸ್ ರಸ್ತೆ ಎಂದು ಇರುವ ಈ ರಸ್ತೆಗೆ ಅವರ ಹೆಸರಿಡಬೇಕೆಂದು ಜಿಲ್ಲಾಡಳಿತಕ್ಕೆ ಯಾಕಿಷ್ಟು ಹಠ ಎಂದು ಅರ್ಥವಾಗುತ್ತಿಲ್ಲ. ಹಿಂದೆ ಈ ರಸ್ತೆಯ ಕೊನೆಯಲ್ಲಿ ವಿಜಯಾ ಬ್ಯಾಂಕ್ ಇತ್ತು. ಈಗ ಅದೂ ಇಲ್ಲ. ಅದನ್ನೂ ಗುಜರಾತ್ನ ಬರೋಡಾ ಬ್ಯಾಂಕ್ನೊಂದಿಗೆ ವಿಲೀನಗೊಳಿಸಲಾಗಿದೆ. ನಮ್ಮ ಆಸ್ಮಿತೆಯ ಪ್ರತೀಕವಾಗಿರುವ ಈ ಬ್ಯಾಂಕ್ಗಳು ಕಣ್ಮರೆಯಾಗುವಾಗ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಾಗ ಯಾರೂ ಮಾತನಾಡಿಲ್ಲ. ಮುಲ್ಕಿ ಸುಂದರ ರಾಮ ಶೆಟ್ಟರ ಹೆಸರನ್ನು ಯಾವುದೇ ರಸ್ತೆಗೆ ಇಡಬಹುದಿತ್ತು. ಇಲ್ಲೇ ಇಡಬೇಕೆಂದು ಇದ್ದಲ್ಲಿ ಇದರ ಹಿಂದಿನ ಲಾಜಿಕ್ ಅರ್ಥವಾಗುತ್ತಿಲ್ಲ. ಇದರ ಹಿಂದೆ ಬಹುದೊಡ್ಡ ಷಡ್ಯಂತರವಿದೆ ಎಂದು ಆರೋಪಿಸಿದರು.
Click this button or press Ctrl+G to toggle between Kannada and English