ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ನಿಧನ

3:17 PM, Sunday, September 27th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Tirumaleshwara Sastriಮಂಗಳೂರು : ಕರೋಪಾಡಿ ಗ್ರಾಮದ ತೆಂಕಬೈಲು ನಿವಾಸಿ, ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.27ರಂದು ನಿಧನ ಹೊಂದಿದರು.

ಅವರು ಪುತ್ರ-ಹವ್ಯಾಸಿ ಭಾಗವತ-ಶಿಕ್ಷಕ ಮುರಳೀಕೃಷ್ಣ ಶಾಸ್ತ್ರಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗ, ದ.ಕ.ಜಿಲ್ಲಾ ರಾಜ್ಯೋತ್ಸವ, ಕುರಿಯ ವಿಟ್ಠಲ ಶಾಸ್ತ್ರಿ, ಸಂಪಾಜೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಪದ್ಯಾಣ, ಪಟ್ಟಾಜೆ, ದಿವಾಣ ಪ್ರಶಸ್ತಿಗಳಲ್ಲದೆ ಹಲವು ಪುರಸ್ಕಾರ, ಸಮ್ಮಾನಗಳಿಗೆ ಭಾಜನರಾಗಿದ್ದರು.

1944ರಲ್ಲಿ ಪ್ರಸಿದ್ಧ ಚಕ್ರಕೋಡಿ ಮನೆತನದ ತೆಂಕಬೈಲು ಕೃಷ್ಣ ಶಾಸ್ತ್ರಿ ಸಾವಿತ್ರಿಯಮ್ಮ ದಂಪತಿಯ ಪುತ್ರರಾಗಿ ಜನಿಸಿದ ತಿರುಮಲೇಶ್ವರ ಶಾಸ್ತ್ರಿಯವರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ತೆಂಕಬೈಲು ಎಂಬಲ್ಲಿ ವಾಸಿಸುತ್ತಿದ್ದರು.

ಹವ್ಯಾಸಿ ಭಾಗವತರಾಗಿಯೂ, ಕೆಲ ವರ್ಷ ವೃತ್ತಿ ಮೇಳಗಳಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೈರಂಗಳ, ಬಪ್ಪನಾಡು, ಮಲ್ಲ, ಮಧೂರು, ಇರಾ, ಕುಂಟಾರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.

ಹವ್ಯಾಸಿ ಭಾಗವತರಾಗಿಯೇ ಜನಪ್ರಿಯರಾಗಿದ್ದ ಇವರು, ಅಗರಿ ಶೈಲಿಯಿಂದ ಪ್ರಭಾವಿತರಾಗಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಲವಾರು ಹವ್ಯಾಸಿ ಆಟ, ಕೂಟಗಳಲ್ಲಿ ಭಾಗವತಿಕೆ ಮಾಡುತ್ತಲೇ ತೆಂಕಬೈಲು ಶೈಲಿಯಲ್ಲಿ ಪ್ರಭುತ್ವ ಸಾಧಿಸಿದ್ದರು. ಅವರು ಪೆರ್ಲದ ಶ್ರೀ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ ಹಿಮ್ಮೇಳ ಅಧ್ಯಾಪಕರಾಗಿ ಹಲವಾರು ಶಿಷ್ಯರನ್ನು ಹೊಂದಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English