ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕೇಸಿನಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಮಂದಿ ಆರೋಪಿಗಳಿಗೆ ಲಖನೌ ವಿಶೇಷ ಸಿಬಿಐ ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದೆ. ಈ ಮೂಲಕ 28 ವರ್ಷಗಳ ದೀರ್ಘ ಕಾಲದ ಕಾನೂನು ಹೋರಾಟಕ್ಕೆ ಇಂದು ತಾತ್ವಿಕ ಅಂತ್ಯ ಸಿಕ್ಕಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಒಂದು ಆಕಸ್ಮಿಕ ಘಟನೆ, ಮಸೀದಿ ಧ್ವಂಸ ಒಂದು ಪೂರ್ವ ನಿಯೋಜಿತ ಕೃತ್ಯವಲ್ಲ, ಉದ್ದೇಶಪೂರ್ವಕವಾಗಿ ಮಸೀದಿಯನ್ನು ಧ್ವಂಸ ಮಾಡಲಾಗಿದೆ ಎಂದು ಹೇಳಲು ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷಿಗಳಿಲ್ಲ ಎಂದು ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್ ಕೆ ಯಾದವ್ ತೀರ್ಪು ಪ್ರಕಟಿಸಿದ್ದಾರೆ.
ಈ ಮೂಲಕ 32 ಮಂದಿ ಆರೋಪಿಗಳಿಗೆ ಇಂದು ಕೋರ್ಟ್ ನಿಂದ ಸಿಕ್ಕಿದ ತೀರ್ಪು ಮಹತ್ವದ ಜಯ ಎನ್ನಬಹುದು. ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಕೇಂದ್ರದ ಸಚಿವರು ಬಿಜೆಪಿಯ ಭೀಷ್ಣ ಎಲ್ ಕೆ ಅಡ್ವಾಣಿ ನಿವಾಸಕ್ಕೆ ತೆರಳಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಬಿಜೆಪಿ ನಾಯಕರಿಗೆ ಇಂದು ನಿರ್ಣಾಯಕ ದಿನವಾಗಿದ್ದು, ಬಹಳ ದೊಡ್ಡ ಜಯ ಸಿಕ್ಕಿದೆ ಎನ್ನಬಹುದು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಸಿಬಿಐ ಕೋರ್ಟ್ ಗೆ ತೀರ್ಪು ನೀಡಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿತ್ತು. ಈ ಹಿಂದೆ ಆಗಸ್ಟ್ 31ರೊಳಗೆ ತೀರ್ಪು ನೀಡಬೇಕೆಂದು ಸೂಚಿಸಿತ್ತು. ಕಳೆದ ವರ್ಷ ಸುಪ್ರೀಂ ಕೋರ್ಟ್, ಅಂತಿಮ ತೀರ್ಪನ್ನು ಆರು ತಿಂಗಳೊಳಗೆ ನೀಡಬೇಕೆಂದು ಸೂಚಿಸಿತ್ತು, ಅದು ಕಳೆದ ಏಪ್ರಿಲ್ 19ಕ್ಕೆ ಮುಕ್ತಾಯವಾಗಿ ನಂತರ ಆಗಸ್ಟ್ 31ರವರೆಗೆ ಕೋವಿಡ್-19 ಹಿನ್ನೆಲೆಯಲ್ಲಿ ವಿಸ್ತರಣೆಯಾಗಿತ್ತು.
2017ರ ಏಪ್ರಿಲ್ 19ರಂದು ಸುಪ್ರೀಂ ಕೋರ್ಟ್ ವಿಶೇಷ ಸಿಬಿಐ ಕೋರ್ಟ್ ಗೆ ನಿರ್ದೇಶನ ನೀಡಿ ಪ್ರತಿನಿತ್ಯ ವಿಚಾರಣೆ ನಡೆಸಿ ಎರಡು ವರ್ಷಗಳೊಳಗೆ ತೀರ್ಪು ನೀಡುವಂತೆ ಆದೇಶಿಸಿತ್ತು.
ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿ ಧ್ವಂಸ ಕುರಿತು 2001ರ ಫೆಬ್ರವರಿ 12ರಂದು ತೀರ್ಪು ನೀಡಿ ಎಲ್ ಕೆ ಅಡ್ವಾಣಿ ಮತ್ತು ಇತರ ಆರೋಪಿಗಳ ವಿರುದ್ಧದ ಪಿತೂರಿ ಪ್ರಕರಣವನ್ನು ಕೈಬಿಟ್ಟಿತ್ತು. ಆದರೆ ಅಲಹಾಬಾದ್ ಹೈಕೋರ್ಟ್ ತೀರ್ಪಿನಲ್ಲಿ ದೋಷವಿದೆ ಎಂದು ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು.
2017ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಮೊದಲು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಲಖನೌ ಮತ್ತು ರಾಯ್ ಬರೇಲಿ ಕೋರ್ಟ್ ನಲ್ಲಿ ಎರಡು ಪ್ರತ್ಯೇಕ ವಿಚಾರಣೆಗಳು ನಡೆಯುತ್ತಿದ್ದವು. ಮೊದಲ ಕೇಸು ಲಖನೌ ಕೋರ್ಟ್ ನಲ್ಲಿ ಕರ ಸೇವಕರ ವಿರುದ್ಧ ಮತ್ತು ಮತ್ತೊಂದು ಕೇಸು ರಾಯ್ ಬರೇಲಿ ಕೋರ್ಟ್ ನಲ್ಲಿ 8 ಮಂದಿ ಅತಿ ಗಣ್ಯ ವ್ಯಕ್ತಿಗಳ ವಿರುದ್ಧವಾಗಿತ್ತು.
2017ರ ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಕೇಸನ್ನು ರಾಯ್ ಬರೇಲಿ ಕೋರ್ಟ್ ನಿಂದ ಸಂಪೂರ್ಣವಾಗಿ ಲಖನೌ ವಿಶೇಷ ಸಿಬಿಐ ಕೋರ್ಟ್ ಗೆ ವರ್ಗಾಯಿಸಿತ್ತು.
ಕೊರೋನಾ ಮತ್ತು ವಯಸ್ಸಿನ ಕಾರಣ ಹಿನ್ನೆಲೆಯಲ್ಲಿ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದರೆ ಉಳಿದ ಆರೋಪಿಗಳು ಲಖನೌ ಕೋರ್ಟ್ ಗೆ ಖುದ್ದಾಗಿ ಹಾಜರಾಗಿ ಹೇಳಿಕೆಗಳನ್ನು ನೀಡುತ್ತಿದ್ದರು.
ತಮ್ಮ ವಿರುದ್ಧ ರಾಜಕೀಯ ಶತ್ರುಗಳು ಪಿತೂರಿ ನಡೆಸಿ ಬಾಬ್ರಿ ಮಸೀದಿ ಕೇಸಿನಲ್ಲಿ ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದೇ ಬಿಜೆಪಿ ನಾಯಕರು ಕೋರ್ಟ್ ನಲ್ಲಿ ವಾದಿಸಿಕೊಂಡು ಬಂದಿದ್ದರು. ಲಖ್ನೋ ಸಿಬಿಐ ವಿಶೇಷ ನ್ಯಾಯಾಲಯ ಸುದೀರ್ಘ 28 ವರ್ಷಗಳ ಕಾಲ ವಿಚಾರಣೆ ನಡೆಸಿ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಅಲ್ಲದೇ ಈ ಪ್ರಕರಣದ ಅಂತಿಮ ತೀರ್ಪು ನೀಡಿರುವ ಜಡ್ಜ್ ಎಸ್ ಕೆ ಯಾದವ್ ಗೆ ಅವರ ಸೇವಾವಧಿಯ ಕೊನೆಯ ದಿನವಾಗಿದೆ.
Click this button or press Ctrl+G to toggle between Kannada and English