ಲೋಕಸಭೆ ಚುನಾವಣೆಯಲ್ಲಿ ಪೂಜಾರಿ ಎಂಟ್ರಿ !

11:08 AM, Tuesday, December 11th, 2012
Share
1 Star2 Stars3 Stars4 Stars5 Stars
(No Ratings Yet)
Loading...

Janardhan Poojari & Vinaykumar  Sorakeಮಂಗಳೂರು :ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಸೋಲು ನಾಲ್ಕು ಬಾರಿ ಗೆಲುವು ದಾಖಲಿಸಿರುವ ಜನಾರ್ದನ ಪೂಜಾರಿ ಐದನೆಯ ದಾಖಲೆಗಾಗಿ ಕೊನೆಯ ಹೋರಾಟಕ್ಕೆ ಇಳಿದಿದ್ದಾರೆ. ತನ್ನನ್ನು ಬೆಂಬಲಿಸಿ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಕರೆ ಮಾಡುತ್ತಿದ್ದಾರೆ ಆಯ್ದ ಕೆಲವರೊಂದಿಗೆ ಆತ್ಮೀಯ ಸಭೆಯನ್ನು ನಡೆಸಿದ್ದಾರೆ. ಕಾರ್ಪೊರೇಟರ್ ಗಳಿಗೆ ತನ್ನನ್ನೇ ಬೆಂಬಲಿಸುವಂತೆ ಕೋರುವ ಆದೇಶವನ್ನೂ ನೀಡಿರುವುದು ಹೊಸ ಬೆಳವಣಿಗೆ.

ತೀರಾ ಇತ್ತೀಚೆಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕಾರ್ಪೊರೇಟರ್ ಗಳ ಗುಪ್ತ ಸಭೆ ಕರೆದು ತನಗೆ ಬೆಂಬಲಿಸುವವರ ಪಡೆಯನ್ನು ಪೂಜಾರಿ ಖಾತ್ರಿ ಪಡಿಸಿಕೊಂಡಿದ್ದರು. ಅಂದಿನ ಸಭೆಗೆ ಮಾಜಿ ಮೇಯರ್ ಅಶ್ರಫ್, ನಾಗೇಂದ್ರಕುಮಾರ್ ಲ್ಯಾನ್ಸಿ ಲಾಟ್ ಪಿಂಟೊ ಬಂದಿರಲಿಲ್ಲ. ಇವರೆಲ್ಲ ಒಂದು ಕಾಲದ ಪೂಜಾರಿ ಕಟ್ಟಾ ಬೆಂಬಲಿಗರು ಎಂಬುದು ಗಮನಿಸಬೇಕಾದ ಅಂಶ. ವೀರಪ್ಪ ಮೊಯ್ಲಿ ಬಣದ ಭಾಸ್ಕರ್ ಮೊಯ್ಲಿಯೂ ಪೂಜಾರಿಯ ಸಭೆಗೆ ಬಂದಿರಲಿಲ್ಲ.

ಜನಾರ್ದನ ಪೂಜಾರಿ ತನಗೆ ಪೂರಕ ವಾತಾವರಣ ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಜಿಲ್ಲೆಯಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎಂದು ವೀಕ್ಷಕರಿಗೆ ಒತ್ತಾಯಿಸಲು ಕಾಂಗ್ರೆಸ್ ಇನ್ನೊಂದು ಗುಂಪು ಸಿದ್ಧವಾಗಿದೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿಯನ್ನೇ ಕರೆ ತಂದ ಶ್ರೇಯಸ್ಸು ಹೊಂದಿದ್ದು, ಪೂಜಾರಿಯ ಟಿಕೆಟ್ ಆಸೆಗೆ ಪೂರಕವಾದಂತಿದೆ.

ಹಿಂದೆ ದ.ಕ. ಜಿಲ್ಲೆಯೊಂದಿಗೆ ಕೊಡಗು ಜಿಲ್ಲೆಯೂ ಮಿಳಿತವಾಗಿದ್ದ, ಮಂಗಳೂರು ಲೋಕಸಭಾ ಕ್ಷೇತ್ರ ಇತ್ತು. ಕ್ಷೇತ್ರ ಮರು ವಿಂಗಡಣೆಯ ಬಳಿಕ ದ.ಕ. ಜಿಲ್ಲೆಯೇ ಪ್ರತ್ಯೇಕ ಕ್ಷೇತ್ರವಾಗಿದೆ. ಆಗಲೂ ಜನಾರ್ದನ ಪೂಜಾರಿ ಸೋತಿದ್ದಾರೆ, ಈಗಲೂ ಸೋತಿದ್ದಾರೆ ಆದುದರಿಂದ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಎಲ್ಲ ಅವಕಾಶಗಳನ್ನೂ ಅವರು ಮುಗಿಸಿದ್ದಾರೆ.

ಕಾಂಗ್ರೆಸ್ ವೀಕ್ಷಕರು ದ.ಕ. ಜಿಲ್ಲೆಗೆ ಬಂದ ಹೊತ್ತಿಗೆ ಪೂಜಾರಿ ಮತ್ತವರ ಬೆಂಬಲಿಗರು ತನಗೆ ಪೂರಕವಾಗಿ ಅಭಿಪ್ರಾಯ ನೀಡುವಂತೆ ಕಾಂಗ್ರೆಸ್ ನ ಸ್ಥಳೀಯ ನಾಯಕರಲ್ಲಿ ನೇರವಾಗಿಯೇ ಕೋರಿದ್ದರು ಎನ್ನುವ ಮಾತುಗಳು ಕೂಡ ಹೊರಬಂದಿತ್ತು. ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾಹಿತಿ ಸಂಗ್ರಹಕ್ಕಾಗಿ ಕೇರಳ ಹಿರಿಯ ರಾಜಕಾರಣಿ ಮುರಳಿಧರ್ ವೀಕ್ಷಕರಾಗಿ ಬಂದು ಹೋಗಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು ಮತ್ತು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ವೀಕ್ಷಕರು ದ.ಕ. ಜಿಲ್ಲೆಯ ರಾಜಕೀಯ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಚುನಾವಣೆ ಉದ್ದೇಶದ ಜಾತಿ ಲೆಕ್ಕಾಚಾರ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ, ಗೆಲುವಿನ ಸಾಧ್ಯತೆಯ ಮತ್ತು ಸೋಲಿನ ಕಾರಣಗಳ ಅವಲೋಕನವನ್ನು ವೀಕ್ಷಕರು ನಡೆಸಿರುವುದರಿಂದ ಜನಾರ್ದನ ಪೂಜಾರಿ ಕೂಡ ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಗಳು ಕೂಡ ದಟ್ಟವಾಗಿದೆ.

ಸೊರಕೆ ನಾಡಿನಲ್ಲಿ ಪೂಜಾರಿ ಬಲ

ರಾಜಕೀಯದಲ್ಲಿ ಯಾರು ಯಾರನ್ನು ಬೆಂಬಲಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ರಾಜಕೀಯದ ಗುಣವೇ ಹಾಗೆ. ಕಾಂಗ್ರೆಸ್ ನ ನಾಯಕ ಹಾಗೂ ಪುತ್ತೂರಿನ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಎರಡು ಅವಧಿಗೆ ಪುತ್ತೂರಿನ ಶಾಸಕರಾಗಿದ್ದವರು. ಈಗ ದ.ಕ. ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ. ಇಲ್ಲಿ ಗಮನಿಸಬೇಕಾದ ರಾಜಕೀಯ ವಿಪರ್ಯಾಸವೆಂದರೆ ಸೊರಕೆ ಅವರ ರಾಜಕೀಯ ತವರು ನೆಲವಾದ ಪುತ್ತೂರು ಬ್ಲಾಕ್ ಕಾಂಗ್ರೆಸ್ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ಆಯ್ಕೆ ಮಾಡುವಂತೆ ವರಿಷ್ಠರಿಗೆ ಮನವಿ ಮಾಡಲಾಗಿದೆ. ಪುತ್ತೂರು ತಾಲೂಕಿನ ಕಡಬ ಮತ್ತು ವಿಟ್ಲ ಬ್ಲಾಕ್ ಕಾಂಗ್ರೆಸ್ ಸಮಿತಿಯವರು ವಿನಯ ಕುಮಾರ್ ಸೊರಕೆ ಅವರನ್ನು ಬೆಂಬಲಿಸಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ. ಹೇಮನಾಥ ಶೆಟ್ಟಿ ಪೂಜಾರಿ ಪರ ಬಹಿರಂಗ ಬೆಂಬಲ ಪ್ರಕಟಿಸುವ ಮೂಲಕ ಪಕ್ಷದ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಛೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕೆಪಿಸಿಸಿ ವೀಕ್ಷಕರು ಪುತ್ತೂರಿಗೆ ಬಂದಿದ್ದಾಗ ಸೊರಕೆ ಬೆಂಬಲಿಗರು ಹೇಮನಾಥ ಶೆಟ್ಟಿಯವರ ಉಮೇದುವಾರಿಕೆಯನ್ನು ಬೆಂಬಲಿಸಿರಲಿಲ್ಲ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮೊದಲಿನಿಂದಲೂ ಪೂಜಾರಿ ಪರವಾಗಿದೆ. ಸೊರಕೆ ಅವರು ಪುತ್ತೂರಿನವರಾದರೂ ಅವರ ತವರು ನೆಲದ ಬ್ಲಾಕ್ ಕಾಂಗ್ರೆಸ್ ಅವರನ್ನು ವಿರೋಧಿಸುತ್ತದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English