ಬೆಂಗಳೂರು: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬಾರ್ ಮಾಲೀಕನನ್ನ ಹತ್ಯೆಗೈದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ನಗರದ ಪ್ರತಿಷ್ಠಿತ ಬ್ರಿಗೇಡ್ ರಸ್ತೆಗೆ ಹೊಂದಿಕೊಂಡಿರುವ ಆರ್.ಎಚ್.ಪಿ ರಸ್ತೆಯಲ್ಲಿರುವ ಡ್ಯೂಯೆಟ್ ಬಾರ್ ಮಾಲೀಕ ಮನೀಶ್ ಶೆಟ್ಟಿ (45 ವರ್ಷ) ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮೂಲಗಳ ಪ್ರಕಾರ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮನೀಷ್ ಅವರ ಬಾರ್ ಮುಂಭಾಗದಲ್ಲೇ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಮನೀಶ್ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್, ‘ಚಿಕ್ಕಮಗಳೂರಿನ ಕೊಪ್ಪದ ಮನೀಶ್ ಶೆಟ್ಟಿ, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬಾರ್ ತೆರೆದಿದ್ದರು. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಬಾರ್ ಮುಂಭಾಗದಲ್ಲೇ ಮನೀಶ್ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಎಂದು ಹೇಳಿದ್ದಾರೆ.
ಕೃತ್ಯಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English