ಮಲ್ಪೆ : ಅಕ್ರಮ ಲೈಟ್ ಫಿಶಿಂಗ್ ಹಾಗೂ ಚೌರಿ ಹಾಕಿ ಮೀನು ಹಿಡಿಯುತಿದ್ದ ತಮಿಳುನಾಡಿನ ಬೋಟುಗಳಲ್ಲಿ ಒಂದನ್ನು ಮಲ್ಪೆ ಬಂದರಿನಿಂದ ಕೇವಲ 10 ನಾಟಿಕಲ್ ಮೈಲು ದೂರದಲ್ಲಿ ವಶಕ್ಕೆ ಪಡೆದ ಮಲ್ಪೆ ಮೀನುಗಾರರ ತಂಡ ಬೋಟಿನಲ್ಲಿದ್ದ 10 ಮಂದಿ ಸಿಬ್ಬಂದಿಗಳೊಂದಿಗೆ ಮಲ್ಪೆ ಬಂದರಿಗೆ ತಂದಿದ್ದಾರೆ.
ಶಾನ್ ಮಾಲಕತ್ವದ ‘ಮಕರ ಸಂಕ್ರಾಂತಿ’ ಪರ್ಸೀನ್ ಬೋಟು ಬುಧವಾರ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದು, ಗುರುವಾರ ಬೆಳಗಿನಜಾವ ಸುಮಾರು 10 ನಾಟಿಕಲ್ ಮೈಲು ದೂರದಲ್ಲಿ ತಮಿಳುನಾಡಿಗೆ ಸೇರಿದ್ದೆನ್ನಲಾದ ಬೃಹತ್ ಗಾತ್ರದ ‘ಇಂಡಿಯನ್’ ಹೆಸರಿನ ಬೋಟು ಲೈಟ್ ಫಿಶಿಂಗ್ ನಡೆಸುತ್ತಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಲೈಟ್ ಫಿಶಿಂಗ್ ಹಾಗೂ ಚೌರಿ ಹಾಕಿ ಮೀನು ಹಿಡಿಯುವುದು ನಿಷೇಧವಾದ್ದರಿಂದ ತಕ್ಷಣ ಮಕರ ಸಂಕ್ರಾಂತಿಯಲ್ಲಿದ್ದ ಮೀನುಗಾರರು ಇದನ್ನು ಪ್ರಶ್ನಿಸಿದರೆನ್ನಲಾಗಿದೆ.
ಯಾವುದೇ ಸಕ್ರಮ ದಾಖಲೆಗಳನ್ನು (ಆರ್‌ಸಿ, ರಿಜಿಸ್ಟರ್ ನಂ.) ಹೊಂದಿಲ್ಲದ ಹೊಸದಾದ ಬೃಹತ್ ಗಾತ್ರದ ಈ ಬೋಟನ್ನು ಗುರುವಾರ ಅಪರಾಹ್ನದ ವೇಳೆಗೆ ಮಲ್ಪೆ ಬಂದರಿಗೆ ತರಲಾಗಿದ್ದು, ಅದೀಗ ಬಂದರಿನಲ್ಲಿದೆ. ಅದರಲ್ಲಿದ್ದ ಸಿಬ್ಬಂದಿಗಳನ್ನು ಮಲ್ಪೆ ಪೊಲೀಸರು ಇದೀಗ ವಿಚಾರಣೆಗೊಳಪಡಿಸಿದ್ದಾರೆ.
ಈ ಸಂದರ್ಭ ಇಂಡಿಯನ್ ಬೋಟಿನಲ್ಲಿದ್ದ ಮೀನುಗಾರರು ಇವರ ಮೇಲೆ ದಾಳಿ ನಡೆಸಿದ್ದು, ಇದರಿಂದ ಮಲ್ಪೆಯ ಬೋಟಿಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ. ಅಲ್ಲದೇ ಇದರಿಂದ ಮಕರ ಸಂಕ್ರಾಂತಿಯಲ್ಲಿದ್ದ ಇಬ್ಬರು ಮೀನುಗಾರರಿಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆ ಗಾಗಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮುದ್ರದಲ್ಲಿ ಈ ವೇಳೆ ಮೀನುಗಾರಿಕೆ ನಡೆಸುತಿದ್ದ ಗಂಗೊಳ್ಳಿ, ಮಂಗಳೂರು ಬಂದರಿನಿಂದ ತೆರಳಿದ ಮೀನುಗಾರರು ಮಕರ ಸಂಕ್ರಾಂತಿಯ ಸಹಾಯಕ್ಕೆ ಬಂದಿದ್ದು, ಇದರಿಂದ ತಮಿಳುನಾಡು ಬೋಟನವರನ್ನು ವಶಕ್ಕೆ ಪಡೆದು ಬೋಟಿ ನೊಂದಿಗೆ ಮಲ್ಪೆ ಬಂದರಿಗೆ ಕರೆ ತರಲಾಗಿದೆ. ನಿನ್ನೆ ರಾಜ್ಯ ಕರಾವಳಿಯಲ್ಲಿ ಹೊರರಾಜ್ಯಗಳ 100ಕ್ಕೂ ಅಧಿಕ ಬೋಟುಗಳು ಅಕ್ರಮ ಲೈಟ್ ಫಿಶಿಂಗ್ ಮೀನುಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ ಎಂದು ಮಲ್ಪೆಯ ಪರ್ಷಿನ್ ಮೀನುಗಾರರ ಸಂಘದ ನವೀನ್ ಬಂಗೇರ ತಿಳಿಸಿದ್ದಾರೆ.
Click this button or press Ctrl+G to toggle between Kannada and English