ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 53ನೆ ವರ್ಷದ ವರ್ಧಂತಿ ಸಮಾರಂಭ ಇದೇ ೨೪ ರಂದು ಶನಿವಾರ ಸರಳವಾಗಿ ನಡೆಯಲಿದೆ.
1948 ರ ನವೆಂಬರ್ 25 ರಂದು ಜನಿಸಿದ ಅಂದಿನ ವೀರೇಂದ್ರ ಕುಮಾರ್ ತನ್ನ ಇಪ್ಪತ್ತನೆ ವರ್ಷ ಪ್ರಾಯದಲ್ಲಿ ಧರ್ಮಸ್ಥಳದ ಇಪ್ಪತ್ತೊಂದನೆ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು.
2017 ಅಕ್ಟೋಬರ್ 24ಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರು 50 ವರ್ಷಗಳ ಸೇವೆಯನ್ನು ಪೂರೈಸಿದ್ದು 2018 ರ ಅ. 24ರ ವರೆಗೆ ಒಂದು ವರ್ಷ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸುವರ್ಣ ಮಹೋತ್ಸವ ಆಚರಿಸಲಾಯಿತು. ಅನೇಕ ಮೌಲಿಕ ಕೃತಿಗಳ ಜೊತೆಗೆ ಧರ್ಮಯಾನ ಎಂಬ ಅಭಿನಂದನ ಗ್ರಂಥ ಪ್ರಕಟಿಸಲಾಗಿದೆ.
ಬಾಲ್ಯ ಮತ್ತು ಶಿಕ್ಷಣ: ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಮಗನಾಗಿ ವೀರೇಂದ್ರ ಕುಮಾರ್ 1948 ರ ನವಂಬರ್ 25 ರಂದು ಜನಿಸಿದರು. ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಡಿ. ರಾಜೇಂದ್ರ ಕುಮಾರ್ ಸಹೋದರರು ಹಾಗೂ ಪದ್ಮಲತಾ ಸಹೋದರಿ ಇದ್ದಾರೆ. ಪತ್ನಿ: ಹೇಮಾವತಿ ಹೆಗ್ಗಡೆ, ಮಗಳು: ಶ್ರದ್ಧಾ ಅಮಿತ್, ಮೊಮ್ಮಗಳು: ಕುಮಾರಿ ಮಾನ್ಯ.
ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳದಲ್ಲಿ ಅಂದಿನ ಬೋರ್ಡ್ ಶಾಲೆಯಲ್ಲಿ ಮುಗಿಸಿ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ಪ್ರೌಢ ಶಾಲಾ ಶಿಕ್ಷಣ ಹಾಗೂ ಬಳಿಕ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪೂರೈಸಿದರು.
ವಿಶೇಷ ಸೇವೆ, ಸಾಧನೆಗಳು: ಧರ್ಮಸ್ಥಳದಲ್ಲಿ 1982 ರಲ್ಲಿ ಭಗವಾನ್ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪ್ರತಿ 12 ವರ್ಷಗಳಿಗೊಮ್ಮೆ ಮೂರು ಮಹಾಮಸ್ತಕಾಭಿಷೇಕ, ಮಹಾನಡಾವಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ, ಉಜಿರೆ, ಮಂಗಳೂರು, ಬೆಂಗಳೂರು, ಮೈಸೂರು ಹಾಗೂ ಧಾರವಾಡದಲ್ಲಿ ಕೆ.ಜಿ.ಯಿಂದ ಪಿ.ಜಿಯವರೆಗೆ ಹಲವು ಶಿಕ್ಷಣ ಸಂಸ್ಥೆಗಳು, ಕಲ್ಯಾಣ ಮಂಟಪಗಳು, ಸ್ವ-ಉದ್ಯೋಗ ತರಬೇತಿ ಕೇಂದ್ರಗಳು ಇತ್ಯಾದಿ ಹೆಗ್ಗಡೆಯವರು ಅನುಷ್ಠಾನಗೊಳಿಸಿದ ಸೇವಾ ಕಾರ್ಯಗಳು.
ಹೆಗ್ಗಡೆಯವರು ಪ್ರಾರಂಭಿಸಿದ ಮಾದರಿ ಯೋಜನೆಗಳನ್ನು ಸರ್ಕಾರ ಹಾಗೂ ಅನೇಕ ಮಠ-ಮಂದಿರಗಳು ಅನುಷ್ಠಾನಗೊಳಿಸುತ್ತಿವೆ.
ಪ್ರಧಾನಿ ಅಭಿನಂದನೆ: ನುಡಿದಂತೆ ನಡೆಯುವ ಹೆಗ್ಗಡೆಯವರು ಸಮಾಜಕ್ಕಾಗಿ ತ್ಯಾಗ ಮತ್ತು ತಪಸ್ಸಿನ ಜೀವನ ನಡೆಸುತ್ತಿದ್ದಾರೆ. ಧರ್ಮಸ್ಥಳವು ಆದರ್ಶ ಧರ್ಮಕ್ಷೇತ್ರ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿ ಹೆಗ್ಗಡೆಯವರನ್ನು ಅಭಿನಂದಿಸಿದ್ದಾರೆ.
ಧರ್ಮಸ್ಥಳದಲ್ಲಿ ಇದೇ 24 ರಂದು ಶನಿವಾರ ಸರಳವಾಗಿ ಪಟ್ಟಾಭಿಷೇಕ ವರ್ಧಂತಿ ಆಚರಿಸುವರು.
Click this button or press Ctrl+G to toggle between Kannada and English