ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಮಾಂಸ ತಂದು ಮಂಗಳೂರಿನ ಸ್ಟಾಲ್ ಗಳಲ್ಲಿ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಅನೇಕ ದೂರು ಬಂದಿದ್ದು, ಅನಧಿಕೃತವಾಗಿ ಮಾರಾಟ ಮಾಡಿರುವುದು ಕಂಡುಬಂದಲ್ಲಿ ಮಳಿಗೆಯ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಮನಪಾ ಮಹಾಪೌರರು ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಬೀಫ್ ಸ್ಟಾಲ್‌ನಲ್ಲಿ ಬೇರೆ ರಾಜ್ಯ, ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡದಂತೆ ಸಂಬಂಧಿತ ಮಾಲಕರು ಕ್ರಮ ಕೈಗೊಳ್ಳಬೇಕು. ಎಲ್ಲ ಮಾರಾಟಗಾರರು ಇನ್ನು ಮುಂದಕ್ಕೆ ಪಾಲಿಕೆಯ ಅಧೀನದಲ್ಲಿರುವ ಅಧಿಕೃತ ಕಸಾಯಿ ಖಾನೆಯಿಂದಲೇ ಮಾಂಸವನ್ನು ಪಡೆದು ಮಾರಾಟ ಮಾಡಬೇಕು ಎಂದು ತಿಳಿಸಿದ್ದಾರೆ.
ಎಲ್ಲ ಬೀಫ್ ಸ್ಟಾಲ್ ಮಾಲಕರು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡಲು ಮಾಂಸವನ್ನು ಕಸಾಯಿಖಾನೆಯಿಂದ ಪಡೆದಾಗ ಮಾಂಸ ಪಡೆದ ವಿವರದ ರಶೀದಿಯನ್ನು ಕಡ್ಡಾಯವಾಗಿ ಇರಿಸಬೇಕು. ಕಸಾಯಿಖಾನೆಗೆ ಮಾಂಸಕ್ಕಾಗಿ ಜಾನುವಾರುಗಳನ್ನು ಕೊಂಡೊಯ್ಯುವಾಗ ಆರ್‌ಟಿಒ ದಿಂದ ಅಧಿಕೃತವಾಗಿ ನೋಂದಣಿಗೊಂಡ ಸ್ಪೆಷಲ್ ಪರ್ಮಿಶನ್ ವೈಹಿಕಲ್ (ಎಸ್‌ಪಿವಿ)ನಲ್ಲೇ ಸಾಗಿಸುವಂತೆ ಸಂಬಂಧಿತ ಕಸಾಯಿಖಾನೆ ಮಾಲಕರು ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರು ತಿಳಿಸಿದ್ದಾರೆ.
Click this button or press Ctrl+G to toggle between Kannada and English