ಮಂಗಳೂರು ನೆಹರೂ ಮೈದಾನಿನಲ್ಲಿ 65ನೇ ಕನ್ನಡ ರಾಜ್ಯೋತ್ಸವ

10:58 PM, Sunday, November 1st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Kannada Rajyotsava ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರು  ನೆಹರೂ ಮೈದಾನದಲ್ಲಿ  65ನೇ ಕನ್ನಡ ರಾಜ್ಯೋತ್ಸವದ  ಧ್ವಜಾರೋಹಣ ನೆರವೇರಿಸಿ ಬಳಿಕ ಗೌರವ ವಂದನೆ ಸ್ವೀಕರಿಸಿದರು.

ಬಳಿಕ ಮಾತನಾಡಿದ  ಅವರ ಪೂರ್ತಿ ಸಂದೇಶ ಇಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ, ಈ ದಿನ ಆಚರಿಸುತ್ತಿರುವ 65ನೇ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ, ತಮ್ಮೆಲ್ಲರಿಗೂ ಜಿಲ್ಲಾಡಳಿತದ ಪರವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಕನ್ನಡವೇ ಧನ ಧಾನ್ಯ, ಕನ್ನಡವೇ ಮನೆ ಮಾನ್ಯ,
ಕನ್ನಡವೇ ಎನಗಾಯ್ತು ಕಣ್ಣು –ಕಿವಿ-ಬಾಯಿ..

Kannada Rajyotsava ಇದು ಮುತ್ಸದ್ಧಿ ನೇತಾರ, ಸಂವಿಧಾನ ತಜ್ಞ, ಕನ್ನಡದ ಹೆಮ್ಮೆ, ಬೆನಗಲ್ ರಾಮರಾಯರ ಸಾರ್ವಕಾಲಿಕ ಕನ್ನಡಾಭಿಮಾನದ ಸ್ಫೂರ್ತಿಯ ನುಡಿ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡಿನ ಪರಿಪೂರ್ಣ ಪರಿಕಲ್ಪನೆ ಸಕಾರಾತ್ಮಕವಾಗಿದ್ದು; 1956 ನವೆಂಬರ್ 01 ರಂದು ಭಾಷಾವಾರು ಪ್ರಾಂತ್ಯಗಳು ರಚನೆಯಾದ ಮೇಲೆ ವಿಶಾಲ ಮೈಸೂರು ಉದಯವಾಯಿತು. 1973 ರ ನವೆಂಬರ್ 01 ರಂದು ಕರ್ನಾಟಕ ಎಂದು ಮರು ನಾಮಕರಣಗೊಳ್ಳುವುದರೊಂದಿಗೆ ಈ ನಾಡು ಕನ್ನಡಿಗರನ್ನು ಭಾವನಾತ್ಮಕವಾಗಿ ಬೆಸೆದಿದೆ.

ಕನ್ನಡ ನಾಡು ಭೌಗೋಳಿಕವಾಗಿ ಬಹುತ್ವವನ್ನು ಹೊಂದಿದ್ದರೂ, ಸಾಮುದಾಯಿಕ ಏಕತೆ ಉಳಿಸಿಕೊಂಡು ಬಂದಿದೆ. ಕನ್ನಡ ಭಾಷೆಯ ಮಾಧುರ್ಯವನ್ನು ಅನೇಕ ಕವಿ ಪುಂಗವರು ಹಾಡಿ ಹೊಗಳಿದ್ದಾರೆ. ಪಂಜೆ ಮಂಗೇಶರಾಯರು, ಗೋವಿಂದ ಪೈಗಳು, ಸೇಡಿಯಾಪು ಕೃಷ್ಣಭಟ್ಟರು, ಕಡೆಂಗೋಡ್ಲು ಶಂಕರಭಟ್ಟರು, ಕವಿ ಗೋಪಾಲಕೃಷ್ಣ ಅಡಿಗರು, ಕಯ್ಯಾರ ಕಿಞ್ಣಣ್ಣ ರೈಗಳು, ಕುಡ್ಪಿ ವಾಸುದೇವ ಶೆಣೈಯವರು, ದಾಮೋದರ ಬಾಳಿಗರು, ಪೇಜಾವರ ಸದಾಶಿವ ರಾವ್ರವರು ಮುಂತಾದ ಅನೇಕ ಕವಿಗಳು ಸೇರಿದಂತೆ, ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕ್ಷೇತ್ರಗಳಿಗೆ ಈ ಜಿಲ್ಲೆಯ ಕೊಡುಗೆ ಅನನ್ಯವಾಗಿದೆ.ಕನ್ನಡಭಾಷೆಯ ಸೊಗಡು ಹಾಗೂ ಸಾಹಿತ್ಯದ ಗಟ್ಟಿತನಕ್ಕೆ 08 ಬಾರಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಒದಗಿ ಬಂದಿದೆ. ಕಡಲತಡಿಯ ಭಾರ್ಗವ ಕೋಟ ಶಿವರಾಮ ಕಾರಂತರು, ರಾಷ್ಟ್ಟಕವಿ ಕುವೆಂಪುರವರು, ದ.ರಾ.ಬೇಂದ್ರೆಯವರು, ಮಾಸ್ತಿ ವೆಂಕಟೇಶ ಅಯ್ಯಂಗಾರರು, ವಿ.ಕೃ.ಗೋಕಾಕ್ ರವರು, ಯು.ಆರ್.ಅನಂತಮೂರ್ತಿಯವರು, ಗಿರೀಶ್ ಕಾರ್ನಾಡರು ಹಾಗೂ ಚಂದ್ರಶೇಖರ ಕಂಬಾರರು ಇವರೆಲ್ಲಾ ಕನ್ನಡದ ರತ್ನಗಳು ಎನ್ನಲು ಕನ್ನಡಿಗರಾದ ನಮಗೆ ಹೆಮ್ಮೆ.

Kannada Rajyotsava ವಿವಿಧ ಭಾಷೆ, ವೈವಿಧ್ಯತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಪ್ರಾಂತ್ಯ ಭಾಷೆಗಳಿಗೆ ಪ್ರಾಧಾನ್ಯತೆ ಕೊಡಬೇಕು ಎಂಬ ಕನಸು ಮಹಾತ್ಮ ಗಾಂಧೀಜಿಯವರದ್ದಾಗಿತ್ತು. ಅವರು ಪ್ರಾಂತೀಯ ಮತ್ತು ಮಾತೃ ಭಾಷೆಗಳಲ್ಲಿ ಅಲ್ಲಿನ ಶಿಕ್ಷಣ ಇರಬೇಕೆಂದು ಪ್ರತಿಪಾದಿಸಿದ್ದರು. ಸ್ಥಳೀಯ ಭಾಷೆಯ ಮೂಲಕ ಆಡಳಿತ ನಡೆಸಬೇಕೆಂಬುದು ಅವರ ಆಶಯವಾಗಿತ್ತು. ನಮ್ಮ ಸರಕಾರ, ರಾಜ್ಯದ ಆಡಳಿತ ಹಾಗೂ ಶಿಕ್ಷಣದಲ್ಲಿ ಕನ್ನಡವನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರಲು ಪಣತೊಟ್ಟಿದೆ.

ನಮ್ಮ ಹೆಮ್ಮೆಯ ಕನ್ನಡ ಸಾಹಿತ್ಯಕ್ಕೆ 2000 ವರ್ಷಗಳಷ್ಟು ಸುದೀರ್ಘ ಇತಿಹಾಸವಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಕ್ರಿ.ಶ.450 ರ ಹಲ್ಮಿಡಿ ಶಾಸನ. ಮೊದಲ ಕನ್ನಡದ ಕೃತಿ ವಡ್ಡಾರಾಧನೆ, ಕವಿರಾಜಮಾರ್ಗ ಈ ಮೇರುಕೃತಿಗಳಲ್ಲದೆ ಪಂಪ, ಪೊನ್ನ, ರನ್ನ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ, ವಚನಕಾರರು, ದಾಸವರೇಣ್ಯರು, ಸರ್ವಜ್ಞ, ರತ್ನಾಕರವರ್ಣಿ, ನಂದಳಿಕೆ ಲಕ್ಷ್ಮೀ ನಾರಾಣಪ್ಪ ಹೇಳಿದಷ್ಟೂ ನಮ್ಮ ಕವಿಗಳ, ಸಾಹಿತ್ಯದ ಹಿರಿಮೆ ಹೆಚ್ಚುತ್ತಾ ಸಾಗುತ್ತದೆ.
“ಇವನಾರವ-ಇವನಾರವ, ಇವನಾರವನೆಂದು.., ಎನಿಸದಿರಯ್ಯ.

Kannada Rajyotsava ಇವನಮ್ಮವ ಇವನಮ್ಮವ, ಇವ ನಮ್ಮವನೆಂದು ಎನಿಸಯ್ಯ.’’ ಎಂಬಂತೆ ಬಹುತ್ವದಲ್ಲಿ ಏಕತೆಯನ್ನು ಕಂಡು, ಬದುಕು ಕಟ್ಟಿಕೊಂಡಿರುವುದು ಈ ದಕ್ಷಿಣಕನ್ನಡ ಜಿಲ್ಲೆಯ ವೈಶಿಷ್ಟ್ಯ !

ಕನ್ನಡವಲ್ಲದೆ, ನಮ್ಮ ತಾಯಿಭಾಷೆಯಾದ ತುಳು ಮತ್ತು ಕೊಂಕಣಿ-ಬ್ಯಾರಿ-ಹವ್ಯಕ, ಹೀಗೆ ಆರೇಳು ಭಾಷೆಗಳ ಜನಪದರಿಂದ, ಸಂಪನ್ನ-ಸಮೃದ್ಧಗೊಂಡಿರುವ ಈ ಅಚ್ಚ ಕನ್ನಡದ ಜಿಲ್ಲೆಯಲ್ಲಿ ಯಾರನ್ನೂ “ಇವನಾರವ” ಎಂದು ಕೇಳಿದವರಿಲ್ಲ, ಬದಲಿಗೆ ಅಣ್ಣ ಬಸವಣ್ಣನವರಂದಂತೆ “ಇವ ನಮ್ಮವ- ಇವ ನಮ್ಮವ” ಎಂದು ಅಂದುಕೊಂಡವರೆ ಇಲ್ಲಿ ಎಲ್ಲರೂ!

ಕನ್ನಡ ಭಾಷೆಯನ್ನು ಕಟ್ಟುವ, ಉಳಿಸಿ ಬೆಳೆಸುವ ಕಾಯಕದಲ್ಲಿಯೂ ದಕ್ಷಿಣ ಕನ್ನಡಿಗರ ಕೊಡುಗೆ ಕಡಿಮೆಯೇನಿಲ್ಲ. ನಾಡು ಹರಿದು ಹಂಚಿ ಹೋಗಿದ್ದ ಅಂದಿನ ದಿನಗಳಲ್ಲಿ ಕನ್ನಡ ನಾಡಿನಾದ್ಯಂತ ಬೇರೆ ಬೇರೆ ಭಾಗಗಳಿಗೆ ಹೋಗಿ ಪಂಜೆ ಮಂಗೇಶರಾಯರು, ಬೆನಗಲ್ ರಾಮರಾವ್ರವರು, ಗೋವಿಂದ ಪೈಗಳು, ಕೋಟ ಶಿವರಾಮ ಕಾರಂತರು ಮುಂತಾದ ಹಿರಿಯರು ಕನ್ನಡದ ಕಹಳೆ ಮೊಳಗಿಸಿದರು.

ಯಕ್ಷಗಾನದ ಪ್ರಸಂಗಕರ್ತರು, ತಮ್ಮ ಹೆಸರುಗಳನ್ನು ಬಹಿರಂಗ ಪಡಿಸದೆ ಕನ್ನಡದಲ್ಲಿ 5,000ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಇದು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅಮೋಘ ಕೊಡುಗೆ ಎಂದರೆ, ಅದೊಂದು ಹೆಮ್ಮೆ.
ಸಂಪನ್ನ ಜನಪದ ಸಂಸ್ಕೃತಿ – ಧಮನಿಯಲಿ ಹೋರಾಟದ ಪ್ರವೃತ್ತಿ!

ಸಾಂಸ್ಕೃತಿಕವಾಗಿ ನಮ್ಮ ಜಿಲ್ಲೆ ತನ್ನದೇ ಆದ ಬಲು ಪುರಾತನವಾದ ಪರಂಪರೆ ಹೊಂದಿದೆ. 21ನೇ ಶತಮಾನಕ್ಕೆ ಅಡಿಯಿಟ್ಟ ಆಧುನಿಕತೆ, ನಮ್ಮ ಸಂಸ್ಕೃತಿಯನ್ನು ವಿರೂಪಗೊಳಿಸಲಿಲ್ಲ. ಯಕ್ಷಗಾನ ಬಯಲಾಟ, ಕಂಬಳ, ನಾಗಮಂಡಲ, ಭೂತಾರಾಧನೆ, ಜಾತ್ರೆ-ಉತ್ಸವಗಳು, ಬದಲಾವಣೆಯ ಗಾಳಿಯಲ್ಲಿ ಕೊಚ್ಚಿ ಹೋಗದೆ ಹೊಸ ಆಯಾಮಗಳನ್ನು ಪಡೆದುಕೊಂಡು ಜೀವಂತವಾಗಿ ನಡೆದುಕೊಂಡು ಮುಂದುವರೆಯುತ್ತಿವೆ.

ಕನ್ನಡದ ಮೊದಲ ದಿನಪತ್ರಿಕೆಯಾದ “ಮಂಗಳೂರು ಸಮಾಚಾರ”, ರೆವರೆಂಡ್ ಹರ್ಮನ್ ಮೊಗ್ಲಿಂಗ್ ಸಂಪಾದಕತ್ವದಲ್ಲಿ 1843ರಲ್ಲಿ ಮಂಗಳೂರಿನಿಂದ ಪ್ರಕಟಣೆಯನ್ನು ಪ್ರಾರಂಭಿಸಿರುವುದು ನಮ್ಮ ಜಿಲ್ಲೆಗೊಂದು ಗರಿ.

ದೇಶದ ಬ್ಯಾಂಕಿಂಗ್ ನಕಾಶೆಯಲ್ಲಿ ದಕ್ಷಿಣ ಕನ್ನಡಕ್ಕೆ ವಿಶಿಷ್ಟ ಸಾರ್ವಧರ್ಮ ಸ್ಥಾನವಿದೆ. ದೇಶದಲ್ಲಿ ಅತ್ಯುತ್ತಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಜಿಲ್ಲೆಗಳಲ್ಲಿ, ನಮ್ಮ ಜಿಲ್ಲೆಯೂ ಮುಂಚೂಣಿಯಲ್ಲಿದೆ ಎಂದು ಹೇಳಲು ನನಗೆ ಅಭಿಮಾನ ಎನಿಸುತ್ತದೆ.

ಸುದೀರ್ಘವಾದ ಮತ್ತು ಅತ್ಯಂತ ವೈವಿಧ್ಯವಾದ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯನ್ನು ತುಂಬಿರುವ ನಮ್ಮ ದಕ್ಷಿಣಕನ್ನಡ ಜಿಲ್ಲೆ, ಇಲ್ಲಿನ ಇತಿಹಾಸ, ಸಾಂಸ್ಕೃತಿಕ ಭಾಷಾ ವೈವಿಧ್ಯತೆ, ಜನಪದ ಆಚರಣೆ ಹಾಗೂ ನಂಬಿಕೆಗಳು ಬಹಳ ಹಿಂದಿನಿಂದಲೂ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಜಿಲ್ಲೆಯ ಜೈವಿಕ ಪರಿಸರ ಮತ್ತು ಸಾಂಸ್ಕೃತಿಕ ಪರಿಸರ ಕರಗುತ್ತಿರುವ ಸಂದರ್ಭದಲ್ಲಿ ಜನರಿಗೆ ಅವುಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಪಿಲಿಕುಳದಲ್ಲಿ ನಿಸರ್ಗಧಾಮದ ಪರಿಕಲ್ಪನೆ ರೂಪತಾಳಿದ್ದು, ಇದರ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರ ಕಟಿಬದ್ಧವಾಗಿದೆ.

ಲಾಕ್‍ಡೌನ್ ಪರಿಣಾಮವಾಗಿ ಎಲ್ಲ ವರ್ಗದ ಜನತೆ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಯಿತು. ಇದನ್ನು ಮನಗಂಡ ನಮ್ಮ ಸರ್ಕಾರ ಮೊದಲ ಪ್ಯಾಕೇಜ್‍ನಲ್ಲಿ 1610 ಕೋಟಿ ರೂ. ಗಳು, ಎರಡನೇ ಪ್ಯಾಕೇಜ್‍ನಲ್ಲಿ 162 ಕೋಟಿ ರೂ.ಗಳು ಹಾಗೂ ಮೂರನೇ ಪ್ಯಾಕೇಜ್‍ನಲ್ಲಿ 500 ಕೋಟಿ ರೂ.ಗಳು ಸೇರಿದಂತೆ ಒಟ್ಟು 2272 ಕೋಟಿ ರೂ.ಗಳ ಮೂರು ಹಂತದ ಪರಿಹಾರದ ಪ್ಯಾಕೇಜನ್ನು ನೀಡಲಾಯಿತು.

ಕೊರೊನಾದಂತ ಸಾಂಕ್ರಾಮಿಕ ರೋಗದ ಕಾರಣ ಉದ್ದಿಮೆ, ವ್ಯಾಪಾರ ಮತ್ತು ವಹಿವಾಟುಗಳು ಸ್ಥಗಿತಗೊಂಡಾಗ ಹತಾಶರಾದ ಅಸಂಘಟಿತ ವಲಯದ ಕಾರ್ಮಿಕರು, ರೈತರು, ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರು, ನೇಕಾರರು, ಮೀನುಗಾರರು, ನಿರ್ಮಾಣ ವಲಯದ ಕಾರ್ಮಿಕರು, ಪಾರಂಪರಿಕ ವೃತ್ತಿನಿರತ ಕ್ಷೌರಿಕರು ಹಾಗೂ ಮಡಿವಾಳರು, ಟ್ಯಾಕ್ಸಿ ಹಾಗೂ ಆಟೋ ಚಾಲಕರು ಸೇರಿ ಬಡವರಿಗೆ ಮುಂಗಡ, ಉಚಿತ ಪಡಿತರ ಹಾಗೂ ಧನಸಹಾಯ ಒದಗಿಸಲಾಯಿತು.

ಕೋವಿಡ್-19 ನಿರ್ವಹಣೆಯಲ್ಲಿ ಜೀವದ ಹಂಗು ತೊರೆದು ತಮ್ಮನ್ನು ತೊಡಗಿಸಿಕೊಂಡಿರುವ ವೈದ್ಯರು, ಶುಶ್ರೂಷಕರು, ಇತರ ವೈದ್ಯಕೇತರ ಸಿಬ್ಬಂದಿ, ಪೊಲೀಸರು, ಜಿಲ್ಲಾ ಆಡಳಿತ, ಮತ್ತಿತರ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರನ್ನು ಕೃತಜ್ಞತಾ ಪೂರ್ವಕವಾಗಿ ಈ ಸಂದರ್ಭದಲ್ಲಿ ನೆನೆಯುತ್ತೇನೆ. ಅಲ್ಲದೇ ಎಲ್ಲಾ ಹಂತದ ಜನಪ್ರತಿನಿಧಿಗಳು ಪರಿಸ್ಥಿತಿ ನಿಭಾಯಿಸಲು ಹಗಲು ರಾತ್ರಿ ಶ್ರಮಿಸಿದ್ದಾರೆ ಎಂಬುದನ್ನು ದಾಖಲಿಸಬೇಕೆಂಬುದು ನಮ್ಮ ಆಶಯ.

ಸರ್ವ ಸಮುದಾಯಗಳನ್ನೊಳಗೊಂಡ ಸರ್ವತೋಮುಖ ಬೆಳವಣಿಗೆ ಮತ್ತು ಹಲವಾರು ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಎಲ್ಲರಿಗೂ ನ್ಯಾಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

• ಕಂದಾಯ ಇಲಾಖೆಯು ಲಾಕ್‍ಡೌನ್ ಸಮಯದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಯಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಿಗೆ 2 ತಿಂಗಳ ಮಾಸಿಕ ಪಿಂಚಣಿಯನ್ನು ಮುಂಗಡವಾಗಿ ನೀಡಿದೆ.
• ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಆಯಾಯ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಸಧೃಢವಾಗಿರುವಂತಹ ಸಮೂಹ ಎ ವರ್ಗದ ದೇವಾಲಯಗಳ ನಿಧಿಯಿಂದ ದೇವಾಲಯಗಳ ಅರ್ಚಕರು ಹಾಗೂ ಸಿಬ್ಬಂದಿಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಗಿದೆ ಹಾಗೂ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳ ವತಿಯಿಂದ ಕೋವಿಡ್-19ರ ಹಿನ್ನೆಲೆಯಲ್ಲಿ ಊಟೋಪಚಾರವಿಲ್ಲದೆ ಬಳಲುತ್ತಿದ್ದ ಸುಮಾರು 07 ಲಕ್ಷ ಜನರಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
• ಕಾರ್ಮಿಕ ಇಲಾಖೆಯು, 15,65,048 ಫಲಾನುಭವಿಗಳಿಗೆ ತಲಾ ರೂ. 5,000 ಗಳಂತೆ ಒಟ್ಟು ರೂ.782.52 ಕೋಟಿ ಸಹಾಯ ಧನವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿರುತ್ತದೆ.
• ದಕ್ಷಿಣಕನ್ನಡ ಜಿಲ್ಲೆಯಲ್ಲಿ 08 ಮೆಡಿಕಲ್ ಕಾಲೇಜುಗಳು ಸೇರಿದಂತೆ, ಒಟ್ಟು 73 ಆಸ್ಪತ್ರೆಗಳು “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಯೋಜನೆ ಅಳವಡಿಸಿಕೊಂಡು ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಪ್ರಸ್ತುತ ಜಿಲ್ಲಾ ವೆನ್ ಲಾಕ್ ಆಸ್ಪತ್ರೆ ಹಾಗೂ ಜಿಲ್ಲೆಯ 08 ಮೆಡಿಕಲ್ ಕಾಲೇಜುಗಳೂ ಸೇರಿದಂತೆ ಒಟ್ಟು 09 ಪ್ರಯೋಗಾಲಯಗಳು ಕೋವಿಡ್ ಆರ್. ಟಿ.ಪಿ.ಸಿ.ಆರ್ ಪರೀಕ್ಷೆ ಸೌಲಭ್ಯ ಒದಗಿಸುತ್ತಿವೆ.
• 2019-20 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 23,61,501 ರೈತರು ನೋಂದಾಯಿಸಿದ್ದು, ರೂ.1020.19 ಕೋಟಿ ವಿಮಾ ಪರಿಹಾರವನ್ನು ಇತ್ಯರ್ಥ ಪಡಿಸಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಅವಧಿಯಲ್ಲಿ ಅತಿ ಹೆಚ್ಚು ರೈತರು ವಿಮಾ ಪರಿಹಾರ ಪಡೆದಿದ್ದಾರೆ. 2020-21 ನೇ ಸಾಲಿಗೆ ಈ ಯೋಜನೆಯಡಿ ರೂ.900.00 ಕೋಟಿ ಅನುದಾನ ನಿಗದಿಪಡಿಸಿದೆ.
• ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರೇರಣೆ ನೀಡುವ ಉದ್ದೇಶದಿಂದ ಪ್ರತಿ ಹೆಕ್ಟೇರ್‍ಗೆ 7,500 ರೂ. ಪ್ರೋತ್ಸಾಹಧನ ನೀಡುವ ಕರಾವಳಿ ಪ್ಯಾಕೇಜ್ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ 5169 ಭತ್ತದ ಬೆಳೆಗಾರರಿಗೆ ರೂ. 2.258 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ.
• ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಜಿಲ್ಲೆಯಲ್ಲಿ 100 ಕೋಟಿ ವೆಚ್ಚದ ಮೆಗಾ ಸೀ ಫುಡ್ ಪಾರ್ಕ್‍ ಶೀಘ್ರದಲ್ಲಿ ನಿರ್ಮಾಣ ಆಗಲಿದೆ.
• ಮೀನುಗಾರಿಕೆಗೆ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಮೀನುಗಾರರಿಗೂ ಕೂಡಾ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸಲಾಗಿದೆ.
• ಯುವಜನಾಂಗಕ್ಕೆ ಪಂಜರಕೃಷಿಯ ಮೀನುಗಾರಿಕೆ ಪರಿಚಯಿಸಲು ರಾಜ್ಯದಲ್ಲಿ 10,000 ಸ್ವ-ಉದ್ಯೋಗ ಸೃಷ್ಟಿ ಮಾಡುವ ಗುರಿ ಸರಕಾರ ಹೊಂದಿದೆ.
• ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳ ಮಾರಾಟ ನೀತಿಯ ಕಾಯ್ದೆಯನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿದ್ದು, ಅಧ್ಯಾದೇಶದಲ್ಲಿ ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಹಾಗೂ ವರ್ತಕರಿಗೆ ರೈತರ ಉತ್ಪನ್ನಗಳನ್ನು ಕೊಳ್ಳುವ ಹಾಗೂ ಮಾರಾಟ ಮಾಡುವ ಬಗ್ಗೆ ಮುಕ್ತ ಅವಕಾಶವನ್ನು ನೀಡಿ, ಅಂತರಾಜ್ಯ ಮತ್ತು ರಾಜ್ಯದ ಒಳಗಡೆ ನಡೆಯುವ ವ್ಯಾಪಾರ ವಹಿವಾಟಿನಲ್ಲಿ ತಡೆ ಇಲ್ಲದೆ ಹಾಗೂ ಪಾರದರ್ಶಕ ಮತ್ತು ದಕ್ಷತೆಯುಳ್ಳ ವ್ಯವಸ್ಥೆಗಳ ಮೂಲಕ ಯೋಗ್ಯ ಧಾರಣೆ ದೊರೆಯುವಂತೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಇದರಿಂದ ತಾನು ಬೆಳೆದ ಬೆಳೆಯ, ಮಾರಾಟವೂ ತನ್ನ ಹಕ್ಕು, ಎಂಬ ಆತ್ಮಸ್ಥೈರ್ಯ ರೈತರಿಗೆ ಬಂದಿದೆ.
• ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯು ವನ್ಯಜೀವಿಗಳಿಂದ ಸಂಭವಿಸುವ ಮಾನವ ಪ್ರಾಣಹಾನಿ ಪ್ರಕರಣಗಳಿಗೆ ಪ್ರಸ್ತುತ ಪಾವತಿಸಲಾಗುತ್ತಿದ್ದ ರೂ.5.00 ಲಕ್ಷಗಳ ದಯಾತ್ಮಕ ಧನವನ್ನು ರೂ.7.50 ಲಕ್ಷಗಳಿಗೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.
• ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪರಿಶಿಷ್ಟ ಜಾತಿ ಪರಿಶಿಷ್ಟ, ಪಂಗಡದವರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರಕಾರ ಯೋಜನಾಬದ್ಧವಾದ ಕಾರ್ಯಕ್ರಮ ರೂಪಿಸಿಕೊಂಡಿದೆ.
• ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಯೋಜನೆಯಡಿ ವಿದ್ಯಾರ್ಥಿವೇತನ, ಎಂ.ಫಿಲ್ ಮತ್ತು ಪಿ.ಹೆಚ್‍.ಡಿ ವಿದ್ಯಾರ್ಥಿಗಳಿಗೆ ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು 6,81,302 ವಿದ್ಯಾರ್ಥಿಗಳಿಗೆ ಒಟ್ಟು ರೂ. 264.00 ಕೋಟಿ ವೆಚ್ಚ ಮಾಡಲಾಗಿದೆ.
• ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಶಕ್ತ ಕಲಾವಿದರಿಗೆ ನೀಡುತ್ತಿರುವ ಮಾಶಾಸನವನ್ನು ರೂ. 1500 ರಿಂದ ರೂ.2000 ಗಳಿಗೆ ಹೆಚ್ಚಿಸಲಾಗಿದೆ ಹಾಗೂ ಸುಮಾರು 14,000 ಕಲಾವಿದರಿಗೆ ಮಾಸಾಶನವನ್ನು ನೀಡಲಾಗುತ್ತಿದೆ.
• ಕನ್ನಡ ಕಲಿಕೆಯ ಎಲ್ಲಾ ಆಸಕ್ತರಿಗೆ ಕನ್ನಡ ಕಲಿಕೆಗೆ ಒಂದು ವೇದಿಕೆ ನಿರ್ಮಾಣ ಮಾಡುವ ಉದ್ದೇಶದಿಂದ ಇ-ಕನ್ನಡ ಕಲಿಕಾ ಅಕಾಡೆಮಿಯನ್ನು” ಸ್ಥಾಪಿಸಿ, ಪ್ರತ್ಯೇಕ ಅಂತರ್ಜಾಲ ವೆಬ್ ಸೈಟನ್ನು ಸಿದ್ಧಪಡಿಸಲಾಗಿದೆ. (https://ekannada.karnataka.gov.in)
• ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‍ ಇಲಾಖೆಯು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜುಲೈ 2019 ರಿಂದ ಜೂನ್ 2020 ರ ಅವಧಿಯಲ್ಲಿ ಒಟ್ಟು 12.05 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಲಾಗಿದ್ದು, 49.05 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ.
• ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ನೂತನ ಕೈಗಾರಿಕಾ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗಗಳ ಸೃಷ್ಟಿಯ ನಿರೀಕ್ಷೆ ಇದೆ.
• ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು 2019-20 ನೇ ಸಾಲಿಗೆ ರಾಜ್ಯದ ಅಧಿಸೂಚಿತ ಮತ್ತು ಖಾಸಗಿ ಧಾರ್ಮಿಕ ಸಂಸ್ಥೆಗಳ ದುರಸ್ಥಿ/ ಜೀರ್ಣೋದ್ಧಾರ/ ನವನಿರ್ಮಾಣ ಉದ್ದೇಶಕ್ಕಾಗಿ ಒಟ್ಟು ರೂ. 10,067.00 ಲಕ್ಷಗಳ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಿದ್ದು, ಒಟ್ಟು 1675 ಧಾರ್ಮಿಕ ಸಂಸ್ಥೆಗಳಿಗೆ ರೂ.10055.40 ಲಕ್ಷಗಳ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಿರುತ್ತದೆ.
• ಕುಳಾಯಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಮೀನುಗಾರಿಕೆ ಬಂದರಿನ ನಿರ್ಮಾಣವನ್ನು 196.51 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಕೇಂದ್ರ ಸರ್ಕಾರದ ಮಂಜೂರಾತಿ ನೀಡಿದೆ.

ಕಟ್ಟುವೆವು ನಾವು ಹೊಸ ನಾಡೊಂದನು..ರಸದ ಬೀಡೊಂದನು…
ಇದು ಒಂದೊಮ್ಮೆ ಅವಿಭಜಿತ ದಕ ಜಿಲ್ಲೆಯವರೆ ಆಗಿದ್ದ ರಸದ ಕವಿ ಗೋಪಾಲ ಕೃಷ್ಣ ಅಡಿಗರ ಮಾತು…ಇವತ್ತು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಗೌರವ ಲಭಿಸಿದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ನಾಡಿನಲ್ಲಿ ಕನ್ನಡವನ್ನು, ಜೊತೆಗೆ ಜನ ಜೀವನವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು, ಸರ್ವತೋಮುಖವಾಗಿ ಬೆಳೆಸಲು, ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಕನ್ನಡ ನಾಡಿನಲ್ಲಿ ಕನ್ನಡದ ಮನಸ್ಸುಗಳು ನಿರ್ಮಾಣವಾಗಬೇಕು. ಕನ್ನಡ ಸಂಸ್ಕ್ರತಿಯನ್ನು ಅಭಿಮಾನಿಸಿ, ಪ್ರೀತಿಸುವ ಮನೋಭಾವ ನಮ್ಮಲ್ಲಿ ಬರಬೇಕು.

ಭಾರ್ಗವಸೃಷ್ಟಿಯ ನೆಲದ ಈ ಕನ್ನಡ ಸಮಾರಂಭದಲ್ಲಿ ಭಾಗವಹಿಸಿರುವ ಎಲ್ಲ ಕನ್ನಡಾಭಿಮಾನಿಗಳಿಗೆ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ, ತಾಯಿ ಭುವನೇಶ್ವರಿಯು ಎಲ್ಲ ಜನತೆಗೆ ಶಾಂತಿ ಮತ್ತು ನೆಮ್ಮದಿಯ ಬದುಕನ್ನು ಕರುಣಿಸಲೆಂದು ಆಶಿಸುತ್ತಾ, ನನ್ನ ಸಂದೇಶ ಭಾಷಣಕ್ಕೆ ವಿರಾಮ ಹಾಡುತ್ತಿದ್ದೇನೆ.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 27 ಮಂದಿಗೆ ವೈಯುಕ್ತಿಕ ಹಾಗೂ 11 ಸಂಘ-ಸಂಸ್ಥೆಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಾಕ್ರಮದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌‌, ಶಾಸಕ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮೇಯರ್ ದಿವಾಕರ ಪಾಂಡೇಶ್ವರ, ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌‌, ಕ.ಸಾ.ಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್, ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹಾಗೂ ಮ.ನ.ಪಾ ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.

Kannada Rajyotsava

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English